
ನವದೆಹಲಿ : ಅಡಿಕೆಗೆ ಈಗ ಬಂಗಾರದ ಬೆಲೆಯಿದ್ದು, ಬೆಳೆಗಾರರು ಸಂತಸದಿಂದಿದ್ದಾರೆ. ಅಲ್ಲದೆ ಬಹಳಷ್ಟು ರೈತರು ಅಡಿಕೆ ಬೆಳೆಯಲು ಮುಂದಾಗಿದ್ದು, ಹೊಸದಾಗಿ ತೋಟ ಕಟ್ಟುತ್ತಿದ್ದಾರೆ. ಇದರ ಮಧ್ಯೆ ಭೂತಾನ್ ನಿಂದ ಅಡಿಕೆ ಅಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
ಭೂತಾನ್ ನಿಂದ ಪ್ರತಿ ವರ್ಷ 17,000 ಟನ್ ತಾಜಾ ಅಡಿಕೆ ಅಮದು ಮಾಡಿಕೊಳ್ಳಲು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಒಪ್ಪಿಗೆ ನೀಡಿದ್ದು, ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಕುಸಿಯಬಹುದು ಎಂಬ ತಳಮಳ ಬೆಳೆಗಾರರಲ್ಲಿ ಶುರುವಾಗಿದೆ.
ದೇಶದಲ್ಲಿ ಅಡಿಕೆ ಉತ್ಪಾದನೆಯ ಶೇಕಡಾ 35ಕ್ಕೂ ಹೆಚ್ಚು ಪ್ರಮಾಣ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದು, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳು ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶಗಳಾಗಿವೆ.
ಯಾವುದೇ ಒಪ್ಪಂದ ಇಲ್ಲದಿದ್ದರೂ ಸಹ ಶ್ರೀಲಂಕಾ, ಮ್ಯಾನ್ಮಾರ್ ಹಾಗೂ ಇಂಡೋನೇಷ್ಯಾದಿಂದ ಈಗಾಗಲೇ ಅಡಿಕೆ ಅಮದಾಗುತ್ತಿದ್ದು, ಇದರ ಜೊತೆಗೆ ಈಗ ಭೂತಾನ್ ನಿಂದಲೂ ಅಡಿಕೆ ಅಮದು ಮಾಡಿಕೊಂಡರೆ ಇದು ಬೆಲೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಬೆಳೆಗಾರರದ್ದಾಗಿದೆ.