ದಾವಣಗೆರೆ : ಏಷ್ಯಾದ ಅತಿದೊಡ್ಡ ಕೆರೆ ಸೂಳೆಕೆರೆ (ಶಾಂತಿ ಸಾಗರ) ನೀರು ಕುಡಿಯಲು ಯೋಗ್ಯವಲ್ಲ ಎಂಬ ಆತಂಕಕಾರಿ ವರದಿ ಬಂದಿದ್ದು, ಸದ್ಯಕ್ಕೆ ಕುಡಿಯುವ ನೀರಿನ ಪೂರೈಕೆ ನಿಲ್ಲಿಸಲಾಗಿದೆ.
ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷಾ ತಂಡ ಭೇಟಿ ನೀಡಿ ವರದಿ ನೀಡಿದ್ದು, ಸೂಳೆಕೆರೆಯಿಂದ ಚನ್ನಗಿರಿ ಪಟ್ಟಣಕ್ಕೆ ಪೂರೈಕೆಸುತ್ತಿರುವ ಕುಡಿಯುವ ನೀರು ಬಳಕೆಗೆ ಯೋಗ್ಯವಿಲ್ಲ ಎಂದು ಹೇಳಿದೆ.
ಕಳೆದ ಒಂದು ವಾರದಿಂದ ಕೆಂಪು ಮಿಶ್ರಿತ ನೀರು ಸರಬರಾಜು ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂಳೆಕೆರೆ ನೀರು ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಿ ನೀರಿನ ಸ್ಯಾಂಪಲ್‌ನ್ನು ಕಳುಹಿಸಲಾಗಿತ್ತು. ಜಿಲ್ಲಾ ನೀರು ತಪಾಸಣಾ ತಂಡ ಈ ನೀರು ಬಳಕೆ ಮಾಡಲು ಯೋಗ್ಯವಿಲ್ಲ ಎಂದು ವರದಿ ನೀಡಿದೆ.
ಸೂಳೆಕೆರೆ ನೀರು ಚಿತ್ರದುರ್ಗ ನಗರ ಹೊಳಲ್ಕೆರೆ, ಚನ್ನಗಿರಿ, ಜಗಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಆದರೆ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.