ಬೆಂಗಳೂರು : ರಾಜ್ಯ ಸರ್ಕಾರವು ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟದ ವಿರುದ್ಧ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲು ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಸಮಿತಿಯಲ್ಲಿ ಬೆಂಗಳೂರು, ಹಾಸನ, ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ನಗರ, ತುಮಕೂರು, ಕೊಪ್ಪ ಹಾಗೂ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸದಸ್ಯರಾಗಿರುತ್ತಾರೆ.
ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣ ನಿಷೇಧವಿದೆ. ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ. ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಧ. ಹಾವಿನ ವಿಷವನ್ನೂ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ. ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ ಯಾವುದೇ ಭಾಗವನ್ನು ಸಂಗ್ರಹಿಸುವುದು, ಸಾಗಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.