ಹೈದರಾಬಾದ್: ಬೃಹತ್ ವಂಚನೆ ಪ್ರಕರಣವನ್ನು ಹೈದರಾಬಾದ್ ಪೊಲೀಸರು ಪತ್ತೆ ಹಚ್ಚಿದ್ದು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 15,000 ಭಾರತೀಯರಿಗೆ 700 ಕೋಟಿ ರೂ.ಗಿಂತ ಹೆಚ್ಚು ವಂಚಿಸಿರುವ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಣವನ್ನು ದುಬೈ ಮೂಲಕ ಚೀನಾಕ್ಕೆ ರವಾನಿಸಲಾಗಿದೆ ಮತ್ತು ಅದರಲ್ಲಿ ಸ್ವಲ್ಪ ಭಾಗವನ್ನು ಲೆಬನಾನ್ ಮೂಲದ ಭಯೋತ್ಪಾದಕ ಗುಂಪು ಹಿಜ್ಬುಲ್ಲಾ ನಿರ್ವಹಿಸುವ ಖಾತೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಈ ಬಗ್ಗೆ ಮಾಹಿತಿ ನೀಡಿದ್ದು, ನಾವು ಈ ಬಗ್ಗೆ ಕೇಂದ್ರ ಸಂಸ್ಥೆಗಳನ್ನು ಎಚ್ಚರಿಸುತ್ತಿದ್ದೇವೆ ಮತ್ತು ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ಘಟಕಕ್ಕೆ ವಿವರಗಳನ್ನು ನೀಡಲಾಗಿದೆ. ಹಣದ ಒಂದು ಭಾಗವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಹಿಜ್ಬುಲ್ಲಾ ನಿರ್ವಹಿಸುವ ವ್ಯಾಲೆಟ್ನಲ್ಲಿ ಠೇವಣಿ ಇಡಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ ಹೈದರಾಬಾದ್ ನಿಂದ ನಾಲ್ವರು, ಮುಂಬೈನಿಂದ ಮೂವರು ಮತ್ತು ಅಹಮದಾಬಾದ್ ನಿಂದ ಇಬ್ಬರು ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ.