ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ, ರೋಹಿಂಗ್ಯಾಗಳು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಅನುಕೂಲವಾಗುವಂತೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ 47 ಜನರನ್ನು ಬುಧವಾರ ಬಂಧಿಸಿದ್ದಾರೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.
“ನಿಖರವಾದ ಯೋಜನೆಯ ನಂತರ, ಎನ್ಐಎ ಮತ್ತು ಅಸ್ಸಾಂ ಪೊಲೀಸರು ವಿವಿಧ ರಾಜ್ಯ ಪೊಲೀಸ್ ಪಡೆಗಳ ಸಹಯೋಗದೊಂದಿಗೆ ನವೆಂಬರ್ 8 ರ ಮುಂಜಾನೆ ದೇಶಾದ್ಯಂತ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕಾರ್ಯಾಚರಣೆಯಲ್ಲಿ ಈವರೆಗೆ ಒಟ್ಟು 47 ದಲ್ಲಾಳಿಗಳು ಮತ್ತು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ ಎಂದು ಅಸ್ಸಾಂನ ವಿಶೇಷ ಡಿಜಿಪಿ ಹರ್ಮೀತ್ ಸಿಂಗ್ ತಿಳಿಸಿದ್ದಾರೆ.
ಬಂಧಿತರಲ್ಲಿ ತ್ರಿಪುರಾದ 25, ಅಸ್ಸಾಂನ 5, ಪಶ್ಚಿಮ ಬಂಗಾಳದ 3, ಕರ್ನಾಟಕದ 9, ಹರಿಯಾಣ ಮತ್ತು ತೆಲಂಗಾಣದ ತಲಾ 1 ಮತ್ತು ತಮಿಳುನಾಡಿನ ಮೂವರು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅಸ್ಸಾಂ ಪೊಲೀಸರ ಪ್ರಕಾರ, ಫೆಬ್ರವರಿ 2023 ರಲ್ಲಿ, ತ್ರಿಪುರಾದಿಂದ ಬರುತ್ತಿದ್ದ ರೈಲಿನಲ್ಲಿ ಕರೀಂಗಂಜ್ ರೈಲ್ವೆ ನಿಲ್ದಾಣದಲ್ಲಿ ಕರೀಂಗಂಜ್ ಪೊಲೀಸರು ರೋಹಿಂಗ್ಯಾಗಳ ಗುಂಪನ್ನು ಪತ್ತೆ ಹಚ್ಚಿದ್ದರು. ಸಮಗ್ರ ತನಿಖೆಯ ನಂತರ, ಅಕ್ರಮ ರೋಹಿಂಗ್ಯಾಗಳು ಮತ್ತು ನುಸುಳುಕೋರರು ಇಂಡೋ-ಬಾಂಗ್ಲಾದೇಶ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.