ಜನಪ್ರಿಯ ನಿರೂಪಕಿ, ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ವಾಸುದೇವನ್ ಅವರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಉದ್ಯಮಿ ಜಗದೀಪ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಮಾ.2) ಬೆಂಗಳೂರಿನಲ್ಲಿ ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿದೆ.
ಚೈತ್ರಾ ಮತ್ತು ಜಗದೀಪ್ ಅವರು ಕೆಲವು ಸಮಯದ ಹಿಂದೆ ಕೆಲಸದ ನಿಮಿತ್ತ ಭೇಟಿಯಾಗಿದ್ದರು. ನಂತರ, ಇಬ್ಬರೂ ಒಂದೇ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವುದು ತಿಳಿದುಬಂದಿತ್ತು. ಸ್ನೇಹ ಪ್ರೀತಿಗೆ ತಿರುಗಿದ ನಂತರ, ಕುಟುಂಬದವರ ಒಪ್ಪಿಗೆಯೊಂದಿಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಪ್ಯಾರಿಸ್ನ ಐಫೆಲ್ ಟವರ್ ಮುಂದೆ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
2017ರಲ್ಲಿ ಚೈತ್ರಾ ವಾಸುದೇವನ್ ಅವರ ಮೊದಲ ಮದುವೆ ನಡೆದಿತ್ತು. ಸತ್ಯ ನಾಯ್ಡು ಎಂಬುವವರೊಂದಿಗೆ ವಿವಾಹವಾಗಿದ್ದರು. ವೈಮನಸ್ಸಿನಿಂದಾಗಿ 2023ರಲ್ಲಿ ವಿಚ್ಛೇದನ ಪಡೆದಿದ್ದರು.
ಚೈತ್ರಾ ವಾಸುದೇವನ್ ಅವರ ವಿವಾಹ ಸಮಾರಂಭದಲ್ಲಿ ಸ್ಯಾಂಡಲ್ವುಡ್ನ ಅನೇಕ ಗಣ್ಯರು ಭಾಗವಹಿಸಿದ್ದರು. ನಟ ಶ್ರೀಮುರಳಿ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮುಂತಾದವರು ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದರು.