‘ಬಿಗ್ ಬಾಸ್’ ಖ್ಯಾತಿಯ ಶಮಿತಾ ಶೆಟ್ಟಿ ಹಾಗೂ ರಾಖೇಶ್ ಬಾನೆಟ್ ಈ ವೇದಿಕೆಯಿಂದ ಹೊರಬಂದ ಬಳಿಕವೂ ಜೊತೆಗೆ ಸುತ್ತಾಟ ನಡೆಸುವ ಮೂಲಕ ಹಲವು ಊಹಾಪೋಹಗಳಿಗೆ ಗ್ರಾಸವಾಗಿದ್ದರು. ಬಳಿಕ ಈ ಜೋಡಿ ತಾವು ಪ್ರೀತಿಯಲ್ಲಿ ಬಿದ್ದಿರುವುದಾಗಿ ಪರೋಕ್ಷವಾಗಿ ಹೇಳಿಕೊಂಡಿತ್ತು.
ಅಲ್ಲದೆ ರಾಖೇಶ್ ಬಾಪಟ್, ಶಮಿತಾ ಶೆಟ್ಟಿ ಅವರ ಸಹೋದರಿ ಶಿಲ್ಪಾ ಶೆಟ್ಟಿ ಖಾಸಗಿ ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗಿಯಾಗುವ ಮೂಲಕ ವದಂತಿಗೆ ಒಂದಷ್ಟು ರೆಕ್ಕೆ ಪುಕ್ಕಗಳು ಬಂದಿದ್ದವು. ಈ ಜೋಡಿ ಸದ್ಯದಲ್ಲೇ ವೈವಾಹಿಕ ಬದುಕಿಗೆ ಕಾಲಿಡಬಹುದು ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು.
ಆದರೆ ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರು ಅಂತರ ಕಾಪಾಡಿಕೊಳ್ಳುವ ಮೂಲಕ ಬೇರೆಯಾಗಿದ್ದಾರೇನೋ ಎಂಬ ಅನುಮಾನಕ್ಕೆ ಕಾರಣರಾಗಿದ್ದರು. ಆದರೆ ಈ ಕುರಿತು ಯಾವುದೇ ಅಧಿಕೃತತೆ ಇರಲಿಲ್ಲ. ಇದರ ಮಧ್ಯೆ ಈ ಜೋಡಿ ಮ್ಯೂಸಿಕ್ ಆಲ್ಬಮ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಹೀಗಾಗಿ ಮತ್ತೆ ಒಂದಾಗಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಶಮಿತಾ ಶೆಟ್ಟಿ ಹಾಗೂ ರಾಖೇಶ್ ಬಾಪಟ್ ಸಾಮಾಜಿಕ ಜಾಲತಾಣದ ಮೂಲಕ ತಾವಿಬ್ಬರು ಬೇರೆಯಾಗಿರುವ ಸಂಗತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಜೊತೆಗೆ ಮ್ಯೂಸಿಕ್ ಆಲ್ಬಮ್ ಗಾಗಿ ಮಾತ್ರ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.