ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಜನ್ -11 ಆರಂಭವಾಗಿದ್ದು, ಹಿಂದೂಪರ ಸಂಘಟನೆ ಹೋರಾಟಗಾರ್ತಿ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಚೈತ್ರಾ ಕುಂದಾಪುರ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸುವಂತೆ ಕಲರ್ಸ್ ಕನ್ನಡ ಚಾನಲ್ ಗೆ ನೊಟೀಸ್ ನೀಡಲಾಗಿದೆ.
ವಕೀಲರೊಬ್ಬರು ಸುದ್ದಿಗೋಷ್ಠಿಯನ್ನು ನಡೆಸಿ, ಚೈತ್ರಾ ಕುಂದಾಪುರ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸುವಂತೆ ತಿಳಿಸಿದ್ದಾರೆ. ಮಾನವೀಯ ಮೌಲ್ಯ, ಸಾಧನೆಗಳನ್ನು ಮಾಡಿದ ವ್ಯಕ್ತಿಗಳನ್ನು ಸ್ಪರ್ಧಿಯನ್ನಾಗಿ ಮಾಡಿ ಜನರಿಗೆ ಸಂದೇಶ ನೀಡಬೇಕಾಗಿರುವ ವಾಹಿನಿ ಚೈತ್ರಾ ಕುಂದಾಪುರ ಅವಳಂತಹ ಆರೋಪಿಯನ್ನು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯನ್ನಾಗಿ ಮಾಡುವ ಮೂಲಕ ಸಮಾಜಕ್ಕೆ, ಜನರಿಗೆ ಯಾವ ಸಂದೇಶ ನೀಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಚೈತ್ರಾ ಕುಂದಾಪುರ ವಿರುದ್ಧ ಈಗಾಗಲೇ 11 ಕೇಸ್ ಗಳು ಇವೆ. ಗಲಾಟೆ, ದೊಂಬಿ, ವಂಚನೆ ಪ್ರಕಾರಣಗಳು ಇವೆ. ವರ್ಷದ ಹಿಂದಷ್ಟೇ ಖ್ಯಾತ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಚುನಾವಣಾ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿ ಹಣ ವಂಚಿಸಿದ್ದರು. ಪ್ರಕರಣ ದಾಖಲಾಗಿ ಪೊಲೀಸರು ಚೈತ್ರಾ ಹಾಗೂ ಸಹಚರರಿಂದ 5 ಕೋಟಿ ಹಣ ವಸೂಲಿ ಮಾಡಿದ್ದಾರೆ. ಚೈತ್ರಾ ವಿರುದ್ಧ ಚಾರ್ಜ್ ಶೋಟ್ ಸಲ್ಲಿಕೆಯಾಗಿ ಜೈಲು ಸೇರಿದ್ದವರು. ಹೀಗಿರುವಾಗ ಬಿಗ್ ಬಾಸ್ ಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಖ್ಯಾತ ನಟ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿದೆ. ಮನೆ ಮನೆಯ ಪ್ರತಿಯೊಬ್ಬರೂ ಬಿಗ್ ಬಾಸ್ ನೋಡುತ್ತಾರೆ. ಕೇವಲ ಟಿಆರ್ ಪಿಗಾಗಿ ಚೈತ್ರಾ ಕುಂದಾಪುರಳಂತವರನ್ನು ಬಳಸಿಕೊಂಡರೆ ಅವರಿಗೆಲ್ಲ ಏನು ಸಂದೇಶ ನೀಡುತ್ತಿದ್ದೀರಿ? ಬಿಗ್ ಬಾಸ್ ಗೆ ಆಕೆಯನ್ನು ಆಹ್ವಾನಿಸುವಾಗ ಸುದೀಪ್ ಆಕೆಯನ್ನು ಫೈರ್ ಬ್ರ್ಯಾಂಡ್ ಎನ್ನುತ್ತಾರೆ. ಆಕೆ ತಾನು ಬಿಗ್ ಬಾಸ್ ನ ಹಿಂದಿನ ಸೀಜನ್ ನ್ನು ಜೈಲಿನಲ್ಲಿ ನೋಡಿದ್ದೇನೆ ಎಂದು ಹೇಳುತ್ತಾಳೆ. ಇದೆಲ್ಲ ಸಮಾಜಕ್ಕೆ ಯಾವ ರೀತಿ ಸಂದೇಶ ನೀಡುತ್ತದೆ?
ಟಿಆರ್ ಪಿಗಾಗಿ ಮಾಧ್ಯಮಗಳು ಈರೀತಿ ಮಾಡುತ್ತಿರುವುದು ಸರಿಯಲ್ಲ. ಅದರಲ್ಲೂ ಕಲರ್ಸ್ ಕನ್ನಡದಂತಹ ವಾಹಿನಿ ಟಿ ಆರ್ ಪಿಗೆ ಚೈತ್ರಾ ಕುಂದಾಪುರಳನ್ನು ಬಳಸಿಕೊಳ್ಳುವುದನ್ನು ಬಿಟ್ಟು ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಇರುವ, ಸಾಧಕರನ್ನು ಬಳಸಿಕೊಳ್ಳಲಿ. ಈ ದೇಶದಲ್ಲಿ, ರಾಜ್ಯದಲ್ಲಿ ಸಾಕಷ್ಟು ಜನ ಪ್ರತಿಭಾವಂತರು, ಸಾಧಕರು ಇದ್ದಾರೆ ಅವರನ್ನು ಬಳಸಿಕೊಳ್ಳಿ. ಅದನ್ನು ಬಿಟ್ಟು ಸಮಾಜದ ಮೇಲೆ ದುಷ್ಪರಿಣಾಮ ಬೀರಿದವರನ್ನು, ಬೀರುತ್ತಿರುವವರನ್ನು ಬಳಸಿಕೊಳ್ಳುವುದು ಸರಿಯಲ್ಲ. ಅವರು ಅಲ್ಲಿ ಇನ್ನಷ್ಟು ಕಿತ್ತಾಟ ನಡೆಸುವುದನ್ನು ನಾವೆಲ್ಲ ಕುಳಿತು ನೋಡಬೇಕಾದ ಸ್ಥಿತಿ. ನಾನು ಓರ್ವ ವಕೀಲನಾಗಿ ಇದನ್ನು ಖಂಡಿಸುತ್ತೇನೆ. ಓರ್ವ ಜನಪರ ಹೋರಾಟ ಸಂಘದ ಅಧ್ಯಕ್ಷನಾಗಿ ಇದನ್ನು ಪ್ರತಿಭಟಿಸುತ್ತೇನೆ. ತಕ್ಷಣ ಚೈತ್ರಾ ಕುಂದಾಪುರಳನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿ. ಈ ಬಗ್ಗೆ ಈಗಾಗಲೇ ಕಲರ್ಸ್ ಕನ್ನಡಕ್ಕೆ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ನಲ್ಲಿ ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.