ಮುಂಬೈ ನಲ್ಲಿ ನಿನ್ನೆ ನಡೆದ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ವಿಜಯೋತ್ಸವದಲ್ಲಿ ಲಕ್ಷಾಂತರ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
ಭಾರತೀಯ ಕ್ರಿಕೆಟ್ ತಂಡವನ್ನು ನೋಡಲು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ ಹಲವರು ಗಾಯಗೊಂಡು, ಕೆಲವರು ಅಸ್ವಸ್ಥರಾದರು ಎಂಬ ಮಾಹಿತಿ ಲಭ್ಯವಾಗಿದೆ. ನೂಕು ನುಗ್ಗಲು ಉಂಟಾದರಿಂದ ಕೆಲವರು ಉಸಿರಾಡಲು ಕಷ್ಟಪಟ್ಟರು. ಇನ್ನೂ ಕೆಲವರು ಉಸಿರಾಡಲು ಆಗದೇ ಅಸ್ವಸ್ಥಗೊಂಡ ಘಟನೆ ಕೂಡ ವರದಿಯಾಗಿದೆ. 10 ಜನರನ್ನು ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ (ಜಿಟಿ ಆಸ್ಪತ್ರೆ) ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಂಟು ಜನರಿಗೆ ಚಿಕಿತ್ಸೆ ನೀಡಿ ತಕ್ಷಣ ಬಿಡುಗಡೆ ಮಾಡಲಾಗಿದ್ದು, ಇಬ್ಬರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ದಾಖಲಾದ ಇಬ್ಬರಲ್ಲಿ ಒಬ್ಬರಿಗೆ ಮೂಳೆ ಮುರಿತವಾಗಿದೆ ಮತ್ತು ಇನ್ನೊಬ್ಬರಿಗೆ ಉಸಿರಾಟದ ತೊಂದರೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾರ್ಬಡೋಸ್ ನೆಲದಲ್ಲಿ ನಡೆದ ಟಿ 20 ವಿಶ್ವಕಪ್ 2024 ರ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ರೋಹಿತ್ ಪಡೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಬಳಿಕ ಭಾರತ ತಂಡವು ತನ್ನ ತಾಯ್ನಾಡಿಗೆ ಮರಳಿದ್ದು, ಮಕ್ಕಳು, ಯುವಕರು ಮತ್ತು ಹಿರಿಯರು ಈ ಐತಿಹಾಸಿಕ ವಿಜಯವನ್ನು ಆಚರಿಸಿದ್ದಾರೆ. ಎಲ್ಲರೂ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ವಿಜಯಯಾತ್ರೆಯಲ್ಲಿ ಭಾಗಿಯಾದರು