ರಾಯ್ಪುರದ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಅಪಘಾತದ ಬಳಿಕ ದೊಡ್ಡ ಸೆಕ್ಸ್ ರಾಕೆಟ್ ಬಯಲಿಗೆ ಬಂದಿದೆ.
ಉಜ್ಬೇಕಿಸ್ತಾನದ ಯುವತಿಯೊಬ್ಬಳು ರಾಯ್ಪುರದಲ್ಲಿ ಅನಾಹುತ ಸೃಷ್ಟಿಸಿದ್ದಳು. ಮದ್ಯದ ಅಮಲಿನಲ್ಲಿ ಕಾರು ಚಾಲಕನ ತೊಡೆ ಮೇಲೆ ಆಕೆ ಕುಳಿತಿದ್ದು, ಇದರಿಂದ ನಿಯಂತ್ರಣ ತಪ್ಪಿ ದಾರಿಹೋಕರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅರುಣ್ ವಿಶ್ವಕರ್ಮ ಎಂಬ ಯುವಕ ಮೃತಪಟ್ಟಿದ್ದು, ಲಲಿತ್ ಚಾಂಡೇಲ್ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಸಂಬಂಧ ತೆಲಿಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ನಂತರ, ಯುವತಿಯ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಆಕೆ ಭಾವೇಶ್ ಆಚಾರ್ಯ ಅವರೊಂದಿಗೆ ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದಾಗ, ರಾಜ್ಯದಲ್ಲಿ ವಿದೇಶಿ ಯುವತಿಯರನ್ನು ಕರೆಸಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಜಾಲವೊಂದು ಬಯಲಿಗೆ ಬಂದಿದೆ. ತೆಲಂಗಾಣ ಮತ್ತು ತ್ರಿಪುರಾದ ಇಬ್ಬರು ಯುವತಿಯರನ್ನು, ಜಾಲದ ಡೀಲರ್ ಮತ್ತು ಲಾಜಿಸ್ಟಿಕ್ಸ್ ಬೆಂಬಲ ನೀಡುವ ಇಬ್ಬರು ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಜ್ಬೇಕಿಸ್ತಾನದ ಯುವತಿ ಪೊಲೀಸ್ ರಿಮಾಂಡ್ನಲ್ಲಿ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ವಿಚಾರಣೆಯ ವೇಳೆ, ಯುವತಿ ಜನವರಿ 30 ರಂದು ಉಜ್ಬೇಕಿಸ್ತಾನ್ನಿಂದ ಭಾರತಕ್ಕೆ ಬಂದಿಳಿದು, 31 ರಂದು ರಾಯ್ಪುರ ತಲುಪಿದ್ದಳು ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿ ನಗರ ಮತ್ತು ತೆಲಿಬಂಧ ಪೊಲೀಸ್ ಠಾಣೆಯಲ್ಲಿ ಪಿಐಟಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.