ಉತ್ತರ ಪ್ರದೇಶ : ಹತ್ರಾಸ್ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 124 ಕ್ಕೆ ಏರಿಕೆ ಆಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ಭೋಲೆ ಬಾಬಾ’ನ ಪಾದ ಸ್ಪರ್ಶಿಸಲು ಜನರ ನಡುವೆ ನೂಕು ನುಗ್ಗಲು ಉಂಟಾಗಿದೆ.ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ. ಘಟನೆ ಬಳಿಕ ಕಾಣೆಯಾದ ‘ಭೋಲೆ ಬಾಬಾ’ ನಿಗಾಗಿ ಉತ್ತರ ಪ್ರದೇಶ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ನೀಡಿದೆ.ಸತ್ಸಂಗ ಕಾರ್ಯಕ್ರಮದಲ್ಲಿ ಏಕಏಕಿ ಕಾಲ್ತುಳಿತದಿಂದ ದುರಂತ ಸಂಭವಿಸಲು ತಕ್ಷಣದ ಕಾರಣಗಳೇನು? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹತ್ರಾಸ್ ನ ಪುಲ್ರೈ ಗ್ರಾಮದಲ್ಲಿ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಆರಂಭದಲ್ಲಿ ಸರಾಗವಾಗಿಯೇ ನಡೆದಿದ್ದ ಕಾರ್ಯಕ್ರಮ ಕೊನೇ ಹಂತದಲ್ಲಿ ದುರಂತಕ್ಕೆ ಕಾರಣವಾಗಿದೆ.
ಭೋಲೆ ಬಾಬಾ ಅವರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸತ್ಸಂಗದ ಪ್ರಚಾರಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಬಾಬಾ ಅವರಿಗೆ ನಮಸ್ಕರಿಸಲೆಂದು ಕೆಲ ಭಕ್ತರು ಪ್ರಯತ್ನಿಸಿದ್ದಾರೆ. ಇದೇ ವೇಳೆ ಕೆಲ ಭಕ್ತರ ಸಮೂಹ ಬಾಬಾ ಅವರನ್ನು ಸ್ಪರ್ಶಿಸಲು ಅವರತ್ತ ನುಗ್ಗಿದೆ. ಈ ವೇಳೆ ನೂಕು ನುಗ್ಗಲು ಆರಂಭವಾಗಿದೆ.