ಹೊಸಪೇಟೆ : ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಓರ್ವ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟು, 27 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕುಡಿಯುವ ನೀರಿನ ಟ್ಯಾಂಕರ್ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸಿದ್ದು, 27 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹೊಸಪೇಟೆ ನಗರಸಭೆ ವ್ಯಾಪ್ತಿಯ 21ನೇ ವಾರ್ಡ್ ಕಾರಿಗನೂರಿನ ಶಿಕಾರಿ ಕ್ಯಾಂಪ್ನಲ್ಲಿ ಶುಕ್ರವಾರ ಬೆಳಗಿನ ಜಾವದಿಂದ ಒಬ್ಬರಾದ ಮೇಲೊಬ್ಬರಂತೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಶುದ್ಧೀಕರಣ ಘಟಕದ ದುರಸ್ತಿ ನಿಮಿತ್ತ ಎರಡು ದಿನ ನೀರು ಪೂರೈಸಿರಲಿಲ್ಲ. ಈ ನಡುವೆ ಜನರು ಬೋರ್ವೆಲ್ ಮತ್ತಿತರೆ ನೀರು ಕುಡಿದಿದ್ದರಿಂದ ಅಸ್ವಸ್ಥರಾಗಿರಬಹುದು. ಘಟನೆ ಬಳಿಕ ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಿದ್ದೇನೆ ಎಂದು ನಗರಸಭೆ ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್ ಹೇಳಿದ್ದಾರೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.