
ಜೈಫುರ್: ಭಾನುವಾರ ತಡರಾತ್ರಿ ಅಜ್ಮೀರ್‌ನ ಮದಾರ್ ರೈಲು ನಿಲ್ದಾಣದ ಬಳಿ ಎರಡು ರೈಲುಗಳು ಹಳಿಯಲ್ಲಿ ಬಂದು ಡಿಕ್ಕಿಯಾಗಿದೆ.
ಇದರಿಂದಾಗಿ ಪ್ರಯಾಣಿಕರ ರೈಲಿನ ನಾಲ್ಕು ಜನರಲ್ ಬೋಗಿಗಳು ಎಂಜಿನ್‌ನೊಂದಿಗೆ ಹಳಿತಪ್ಪಿವೆ. ಹಳಿತಪ್ಪಿದ ಕಾರಣ ಹಳಿಗಳು ಕಿತ್ತು ಹೋಗಿವೆ. ಅಪಘಾತದ ನಂತರ ಪ್ಯಾಸೆಂಜರ್ ರೈಲಿನ ಜನರಲ್ ಕೋಚ್‌ನಲ್ಲಿ ಕುಳಿತ ಪ್ರಯಾಣಿಕರು ಕಿರುಚಾಟ ನಡೆಸಿದ್ದು, ರೈಲಿನಿಂದ ಕೆಳಗಿಳಿದು ಅಲ್ಲಿ ಇಲ್ಲಿ ಓಡಲು ಪ್ರಾರಂಭಿಸಿದ್ದಾರೆ. ಆದರೆ, ಅಪಘಾತದಲ್ಲಿ ಯಾವುದೇ ಜೀವ ಅಥವಾ ಆಸ್ತಿಪಾಸ್ತಿಗೆ ಧಕ್ಕೆಯಾಗಿಲ್ಲ.
ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹಳಿತಪ್ಪಿದ ಕೋಚ್ ಮತ್ತು ಇಂಜಿನ್ ಅನ್ನು ಹಳಿಗೆ ತರಲು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.
ಅಪಘಾತಕ್ಕೀಡಾದ ಅಜ್ಮೀರ್ ಆಗ್ರಾ ಫೋರ್ಟ್ ಸಾಬರಮತಿ ಪ್ಯಾಸೆಂಜರ್ ರೈಲು ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಸಮಯಕ್ಕೆ ಸರಿಯಾಗಿ ಹೊರಟಿದೆ ಎಂದು ಎಡಿಆರ್‌ಎಂ ಬಲದೇವ್ ರಾಮ್ ಹೇಳಿದ್ದಾರೆ. ರೈಲಿನ ಕಾರ್ಯಾಚರಣೆಯು ಸುಗಮವಾಗಿ ಸಾಗಿ ರಾತ್ರಿ 1 ಗಂಟೆಗೆ ಮದರ್ ರೈಲು ನಿಲ್ದಾಣವನ್ನು ತಲುಪುವ ಮೊದಲು, ಸ್ವಲ್ಪ ದೂರದಲ್ಲಿ ಮತ್ತೊಂದು ರೈಲಿನಿಂದ ಹಳಿ ಬದಲಾಯಿಸುವಾಗ, ಪ್ಯಾಸೆಂಜರ್ ರೈಲು ಬದಿಗೆ ಡಿಕ್ಕಿ ಹೊಡೆದಿದೆ. ಆದರೆ, ಅಪಘಾತಕ್ಕೆ ಇತರೆ ತಾಂತ್ರಿಕ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಅಪಘಾತದಿಂದಾಗಿ ಹಳಿಗಳು ಕಿತ್ತು ಹೋಗಿವೆ. 4 ಬೋಗಿಗಳು ಹಳಿ ತಪ್ಪಿವೆ ಎಂದು ಹೇಳಲಾಗಿದೆ.
ರೈಲ್ವೆ ಅಧಿಕಾರಿಗಳು ಅಜ್ಮೀರ್ ರೈಲು ನಿಲ್ದಾಣ ಮತ್ತು ಮದರ್ ರೈಲು ನಿಲ್ದಾಣದಲ್ಲಿ ಜರ್ನಲ್ ಕೋಚ್‌ನ ಪ್ರಯಾಣಿಕರಿಗೆ ಆಹಾರ ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಿದ್ದಾರೆ.
ಸ್ಥಳದಲ್ಲಿ ಸಂಭವಿಸಿದ ರೈಲು ಅಪಘಾತದಿಂದಾಗಿ ಹಳಿಗಳು ನೆಲದಿಂದ ಕಿತ್ತು ಬೇರೆ ಬೇರೆ ಸ್ಥಳಗಳಲ್ಲಿ ಚದುರಿಹೋಗಿವೆ ಮತ್ತು ಎಂಜಿನ್ ಮತ್ತು ಕೋಚ್‌ನ ಚಕ್ರಗಳು ನೆಲದಲ್ಲಿ ಹುದುಗಿವೆ ಎಂದು ಎಡಿಆರ್‌ಎಂ ಹೇಳಿದ್ದಾರೆ. ಅಪಘಾತಕ್ಕೀಡಾದ ರೈಲಿನ ಕೋಚ್ ಮತ್ತು ಇಂಜಿನ್ ತೆಗೆಯುವ ಕಾರ್ಯ ನಡೆಯುತ್ತಿದ್ದು, ಈ ಕೆಲಸವು ಮುಂದಿನ 8 ರಿಂದ 10 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.
ಸಹಾಯವಾಣಿ ಸಂಖ್ಯೆ ಬಿಡುಗಡೆ
ಸಬರಮತಿ ಆಗ್ರಾ ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅಪಘಾತದ ನಂತರ, ರೈಲ್ವೆ ಆಡಳಿತವು ಸಹಾಯ ಕೇಂದ್ರ ಸಂಖ್ಯೆ 0145-2429642 ಅನ್ನು ನೀಡಿದೆ. ರೈಲಿನಲ್ಲಿ ಪ್ರಯಾಣಿಸುವ ಬಗ್ಗೆ ಮಾಹಿತಿ ಪಡೆಯಲು, ನೀವು ಈ ಸಂಖ್ಯೆಯನ್ನು ಸಂಪರ್ಕಿಸಬಹುದು.