ಟ್ಯಾಟೂ ಟ್ರೆಂಡ್ ಈಗ ಜೋರಾಗಿದೆ. ಬಹುತೇಕ ಎಲ್ಲ ಯುವಕ-ಯುವತಿಯರು ಹಚ್ಚೆ ಹಾಕಿಸಿಕೊಳ್ಳಲು ಬಯಸುತ್ತಾರೆ. ಆದರೆ ಟ್ಯಾಟೂ ಪ್ರಿಯರಿಗೆ ಶಾಕಿಂಗ್ ಸುದ್ದಿಯಿದೆ. ಸ್ವೀಡನ್‌ನಲ್ಲಿ ನಡೆಸಲಾದ ಹೊಸ ಅಧ್ಯಯನದ ಪ್ರಕಾರ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ರಕ್ತದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಟ್ಯಾಟೂ ಹಾಗೂ ಲಿಂಫೋಮಾ, ರಕ್ತದ ಕ್ಯಾನ್ಸರ್ ನಡುವಣ ಸಂಬಂಧವನ್ನ ಈ ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ.
ಸ್ವೀಡನ್‌ನ ಲಿಂಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನಕ್ಕಾಗಿ ಸ್ವೀಡಿಷ್ ರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟರ್ ಅನ್ನು ವಿಶ್ಲೇಷಿಸಿದ್ದಾರೆ. 2007 ಮತ್ತು 2017ರ ನಡುವೆ ಲಿಂಫೋಮಾ ಹೊಂದಿದ್ದ 20 ರಿಂದ 60 ವರ್ಷ ವಯಸ್ಸಿನ ಜನರ ಡೇಟಾವನ್ನು ಪರಿಶೀಲಿಸಿದ್ದಾರೆ. ಇವರನ್ನು ಲಿಂಫೋಮಾ ಹೊಂದಿರದ ಅದೇ ವಯಸ್ಸಿನ ಆರೋಗ್ಯವಂತ ಜನರ ಗುಂಪಿನೊಂದಿಗೆ ಹೋಲಿಸಲಾಗಿದೆ.
ಹಚ್ಚೆ ಹಾಕಿಸಿಕೊಳ್ಳದವರಿಗೆ ಹೋಲಿಸಿದರೆ ಟ್ಯಾಟೂ ಹಾಕಿಸಿಕೊಂಡವರಲ್ಲಿ ರಕ್ತದ ಕ್ಯಾನ್ಸರ್ ಅಪಾಯ ಶೇ.21ರಷ್ಟು ಹೆಚ್ಚಾಗಿರುತ್ತದೆ. ಇತ್ತೀಚೆಗೆ ಹಚ್ಚೆ ಹಾಕಿಸಿಕೊಂಡಿದ್ದರೆ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ಹಚ್ಚೆ ಹಾಕಿಸಿಕೊಂಡವರಲ್ಲಿ ರಕ್ತದ ಕ್ಯಾನ್ಸರ್ ಅಪಾಯ 81 ಪ್ರತಿಶತದಷ್ಟು ಹೆಚ್ಚಾಗಿರುತ್ತದೆ.
ಟ್ಯಾಟೂ ಶಾಯಿಯಲ್ಲಿರುವ ಯಾವ ರಾಸಾಯನಿಕಗಳು ಲಿಂಫೋಮಾದ ಅಪಾಯವನ್ನು ಹೆಚ್ಚಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಂಶೋಧಕರು ಹೇಳುತ್ತಾರೆ. ಹಚ್ಚೆಗಳು ನೇರವಾಗಿ ಕ್ಯಾನ್ಸರ್‌ಗೆ ಕಾರಣವೆಂಬುದು ಸಾಬೀತಾಗಿಲ್ಲ, ಆದರೆ ಇವೆರಡರ ನಡುವೆ ಸಂಪರ್ಕವಿರಬಹುದು ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.
ಲಿಂಫೋಮಾ ಅಪರೂಪದ ಕ್ಯಾನ್ಸರ್‌ಗಳಲ್ಲೊಂದು. ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮತ್ತು ಉತ್ತಮ ಗುಣಮಟ್ಟದ ಶಾಯಿಯನ್ನು ಬಳಸುವ ವೃತ್ತಿಪರ ಟ್ಯಾಟೂ ಕಲಾವಿದರ ಬಳಿ ಟ್ಯಾಟೂ ಹಾಕಿಸಿಕೊಂಡಲ್ಲಿ ಹೆಚ್ಚಿನ ಅಪಾಯವಾಗುವುದಿಲ್ಲ. ಆದರೂ ಮುನ್ನೆಚ್ಚರಿಕೆ ಬಹಳ ಮುಖ್ಯ ಎನ್ನುತ್ತಾರೆ ಸಂಶೋಧಕರು.