ಬಿಹಾರದ ಮುಂಗೇರ್ ನಗರದಲ್ಲಿರುವ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವ ವೇಳೆ ಇದ್ದಕ್ಕಿದ್ದಂತೆ ಕರೆಂಟ್ ಕೈಕೊಟ್ಟಿದೆ. ಕಾಲೇಜಿನ ಜನರೇಟರ್ ಕೂಡ ಕಾರ್ಯನಿರ್ವಹಿಸಲೇ ಇಲ್ಲ. ಈ ವೇಳೆ ವಿದ್ಯಾರ್ಥಿಗಳು ತಮ್ಮ ತಮ್ಮ ಮೊಬೈಲ್ ಟಾರ್ಚ್ ಲೈಟ್ ಆನ್ ಮಾಡಿಕೊಂಡು ಆ ಬೆಳಕಿನಲ್ಲಿ ಪರೀಕ್ಷೆ ಬರೆದಿದ್ದಾರೆ.
ಮುಂಗೇರ್‌ನ ಆರ್‌ಡಿ ಮತ್ತು ಡಿಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಪರೀಕ್ಷೆ ಬರೆಯಲು ಸಮಸ್ಯೆಯಾಯ್ತು ಅಂತಾ ಪರೀಕ್ಷಾರ್ಥಿಗಳು ತಿಳಿಸಿದ್ದಾರೆ. ಜನರೇಟರ್ ಆನ್ ಆಗದೇ ಇದ್ದಿದ್ದರಿಂದ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾಟರಿ ಆನ್ ಮಾಡಿಕೊಳ್ಳುವಂತೆ ಪರೀಕ್ಷಾ ಮೇಲ್ವಿಚಾರಕರೇ ಸೂಚನೆ ನೀಡಿದ್ದಾರೆ. ಆದರೆ ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಇನ್ನೊಂದು ಕೈಯ್ಯಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಾಕಷ್ಟು ಕಷ್ಟಪಟ್ಟಿದ್ದಾರೆ.
ಮೊದಲನೇ ವರ್ಷದ ಬಿಎ ವಿದ್ಯಾರ್ಥಿಗಳಿಗೆ ಇತಿಹಾಸ ವಿಷಯದ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಿದೆ. ಕಾಲೇಜು ಆಡಳಿತ ಮಂಡಳಿ ಜನರೇಟರ್ ಆನ್ ಮಾಡಲು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಮೆಕ್ಯಾನಿಕ್ ಅನ್ನು ಕರೆಸಿದ್ರೂ ಅದನ್ನು ಸರಿಪಡಿಸಲಾಗಿಲ್ಲ, ನಾವು ಅಸಹಾಯಕರಾಗಿದ್ದೆವು ಅಂತಾ ಪರೀಕ್ಷಾ ಕೇಂದ್ರದ ಅಧೀಕ್ಷಕ ಸಂಜಯ್ ಭಾರ್ತಿ ಅಳಲು ತೋಡಿಕೊಂಡಿದ್ದಾರೆ. ಪರೀಕ್ಷೆಯನ್ನು ಮುಂದೂಡುವುದು ಅಸಾಧ್ಯವಾಗಿದ್ದರಿಂದ ಮೊಬೈಲ್ ಟಾರ್ಚ್ ಬಳಸುವಂತೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.
ನಿಯಮದ ಪ್ರಕಾರ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸುವಂತಿಲ್ಲ. ಹಾಗಾಗಿ ಈ ಘಟನೆಗೆ ಸಂಬಂಧಪಟ್ಟಂತೆ ಪರೀಕ್ಷಾ ಕೇಂದ್ರದ ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ, ಅವರಿಂದ ವಿವರಣೆ ಕೋರಲಾಗಿದೆ. ಪರೀಕ್ಷೆಯ ಸಮಯದಲ್ಲಿ ವಿದ್ಯುತ್ ಕಡಿತಗೊಂಡರೆ ಬೆಳಕಿನ ಪರ್ಯಾಯ ವ್ಯವಸ್ಥೆ ಮಾಡಲು ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.