
ಅಮೆರಿಕದ ಫ್ಲೋರಿಡಾದಲ್ಲಿ ಅಪ್ರಾಪ್ತನೊಬ್ಬ ಆಘಾತಕಾರಿ ಕೃತ್ಯವೆಸಗಿದ್ದಾನೆ. ಹದಿಹರೆಯದ ಹುಡುಗಿಗೆ ಬರೋಬ್ಬರಿ 114 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿತ 14 ವರ್ಷದ ಬಾಲಕನನ್ನು ವಯಸ್ಕರ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು.
ಫ್ಲೋರಿಡಾದ ಸೆಂಟ್ ಜಾನ್ಸ್ ಕೌಂಟಿಯಲ್ಲಿ ಮೇ 9 ರಂದು 13 ವರ್ಷದ ಬಾಲಕಿ ಟ್ರಿಸ್ಟಿನ್ ಬೈಲೆಯನ್ನು ಕೊಲೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಬಾಲಕ ಐಡೆನ್ ಫ್ಯೂಸಿಯನ್ನು ವಯಸ್ಕನ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಡೆನ್ ಫ್ಯೂಸಿ ಪ್ರಕರಣವನ್ನು ಬಾಲಾಪರಾಧಿಗಳ ಕೋರ್ಟ್ ನಿಂದ ವಯಸ್ಕರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯದ ವಕೀಲ ಆರ್. ಜೆ. ಲಾರಿಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
7 ನೇ ಸರ್ಕ್ಯೂಟ್‌ನ ರಾಜ್ಯ ವಕೀಲರ ಕಚೇರಿ ನೀಡಿರುವ ಮಾಹಿತಿಯಂತೆ, ಪ್ರಕರಣದ ಕ್ರೂರತೆಯನ್ನು ಗಮನದಲ್ಲಿಟ್ಟುಕೊಂಡು ವಯಸ್ಕರ ರೀತಿ ಆರೋಪ ಹೊರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೇ 9 ರಂದು ಸೇಂಟ್ ಜಾನ್ಸ್ ಕೌಂಟಿ ಶೆರೀಫ್ ಕಚೇರಿಗೆ ಟ್ರಿಸ್ಟಿನ್ ಬೈಲೆ ತೆರಳಿದ್ದು, ಆಕೆ ನಾಪತ್ತೆಯಾಗಿದ್ದರಿಂದ ಮಧ್ಯರಾತ್ರಿವರೆಗೂ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ನಂತರ ಸಮೀಪದ ಕೊಳದ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಐಡೆನ್ ಫ್ಯೂಸಿಯನ್ನು ಶಂಕಿತ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ವೈದ್ಯಕೀಯ ಪರೀಕ್ಷಕರ ವರದಿಯನ್ನು ಉಲ್ಲೇಖಿಸಿ, ಬೈಲೆ ದೇಹದ ಮೇಲೆ 114 ಬಾರಿ ಇರಿತದ ಗಾಯಗಳಾಗಿರುವುದು ಕಂಡು ಬಂದಿದೆ. ಕನಿಷ್ಠ 49 ಗಾಯಗಳು ಆಕೆಯ ಕೈಗಳು, ತೋಳು ಮತ್ತು ತಲೆಯ ಭಾಗದಲ್ಲಿ ಕಂಡು ಬಂದಿವೆ. ಇದು ಭಯಾನಕ ಹತ್ಯೆಯಾಗಿದೆ ಎಂದು ಲಾರಿಜಾ ಹೇಳಿದ್ದಾರೆ.

ಈ ಕ್ರೂರವಾದ ದಾಳಿಯಲ್ಲಿ ಐಡೆನ್ ಫ್ಯೂಸಿ ಬಳಸಿದ ಚಾಕು ಸಮೀಪದ ಕೊಳವೊಂದರಲ್ಲಿ ಪತ್ತೆಯಾಗಿದೆ. ಅದನ್ನು ಜಪ್ತಿ ಮಾಡಲಾಗಿದೆ. ಚಾಕುವಿನ ತುದಿಯ ಮುರಿದ ಭಾಗ ಹುಡುಗಿಯ ತಲೆ ಬುರುಡೆಯಲ್ಲಿ ಕಂಡುಬಂದಿದೆ. ಫ್ಯೂಸಿ ಶೂ, ಆತ ಮಲಗುವ ಕೋಣೆ ಮತ್ತು ಟೀ ಶರ್ಟ್ ನಲ್ಲಿ ಬೈಲೆ ಡಿಎನ್ಎ ಕಂಡುಬಂದಿದೆ.
ಈ ಘಟನೆ ಪೋಷಕರಿಗೆ ಎಲ್ಲಾ ಪಾಠವಾಗುವಂತೆ ಇದೆ. ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ. ಏನು ಅನುಸರಿಸುತ್ತಿದ್ದಾರೆ ಎಂಬುದರ ಬಗ್ಗೆ ಪೋಷಕರು ನಿಗಾ ವಹಿಸಬೇಕಿದೆ. ಇಂತಹ ಕೆಟ್ಟ ಕ್ರೂರ ಹತ್ಯೆಗಳು ನಡೆಯದಂತೆ ತಡೆಯಲು ಸಾಧ್ಯವಾಗದಿದ್ದರೂ ಕನಿಷ್ಠ ಪ್ರಯತ್ನವನ್ನಾದರೂ ಮಾಡುವ ಅಗತ್ಯವಿದೆ ಎಂದು ಲಾರಿಜಾ ತಿಳಿಸಿದ್ದಾರೆ. ಜೂಮ್ ಮೂಲಕ ಆರೋಪಿ ಫ್ಯೂಸಿಯನ್ನು ಕೋರ್ಟಿಗೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶ ಹೊವಾರ್ಡ್ ಎಮ್. ಮಾಲ್ಟ್ಜ್ ಅವರು ಫ್ಯೂಸಿಗೆ ವಿಚಾರಣೆ ನಡೆಸಿ, ಆತನ ಹಕ್ಕುಗಳು, ಆರೋಪಗಳು ಮತ್ತು ಆತನನ್ನು ಬಂಧಿಸಲು ಕಾರಣವೇನು ಎಂಬುದರ ಬಗ್ಗೆ ತಿಳಿಸಿದ್ದಾರೆ.
