ಭಾರತದ ಷೇರು ಮಾರುಕಟ್ಟೆ ಹೊಸ ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಇದೀಗ ವಿಶ್ವದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಈ ರೇಸ್ನಲ್ಲಿ ಹಾಂಕಾಂಗ್ ಅನ್ನು ಭಾರತ ಹಿಂದಿಕ್ಕಿದೆ.
ಸೋಮವಾರದ ವಹಿವಾಟಿನ ಬಳಿಕ ದೇಶೀಯ ಮಾರುಕಟ್ಟೆಯಲ್ಲಿ ಲಿಸ್ಟೆಡ್ ಎಕ್ಸ್ಚೇಂಜ್ಗಳ ಸಂಯೋಜಿತ ಮಾರುಕಟ್ಟೆ ಕ್ಯಾಪ್ 4.33 ಟ್ರಿಲಿಯನ್ ಡಾಲರ್ ತಲುಪಿತ್ತು. ಹಾಂಕಾಂಗ್ನ ಷೇರು ಮಾರುಕಟ್ಟೆಯ ಕ್ಯಾಪ್ 4.29 ಟ್ರಿಲಿಯನ್ ಮಟ್ಟದಲ್ಲಿ ಉಳಿಯಿತು.
ಬೆಳಗ್ಗೆ ಬಿಎಸ್ಇ ಮಾರುಕಟ್ಟೆ ಬಂಡವಾಳವು 3.72 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿತ್ತು. ಸೆನ್ಸೆಕ್ಸ್ ಸುಮಾರು 450 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ್ದಲ್ಲದೆ ನಿಫ್ಟಿ ಕೂಡ 21700ರ ಮಟ್ಟವನ್ನು ದಾಟಿತು.
ಹಾಂಕಾಂಗ್ ಅನ್ನು ಹಿಂದಿಕ್ಕಿರುವುದು ದೇಶದ ಷೇರು ಮಾರುಕಟ್ಟೆ ಮತ್ತು ಹೂಡಿಕೆದಾರರಿಗೆ ಪಾಲಿಗೆ ಬಹುದೊಡ್ಡ ಸಾಧನೆ ಎಂದು ಪರಿಗಣಿಸಬಹುದು. ಇದು ಭಾರತದ ಮೇಲೆ ದೇಶೀಯ ಮತ್ತು ವಿದೇಶಿ ಹೂಡಿಕೆದಾರರ ವಿಶ್ವಾಸವನ್ನು ತೋರಿಸುತ್ತದೆ.
ವಿಶೇಷ ಅಂದ್ರೆ ಭಾರತೀಯ ಷೇರು ಮಾರುಕಟ್ಟೆಯ ಮೌಲ್ಯ 2023ರ ಡಿಸೆಂಬರ್ 5ರಂದು ಮೊದಲ ಬಾರಿಗೆ 4 ಟ್ರಿಲಿಯನ್ ದಾಟಿತ್ತು. ಈಕ್ವಿಟಿ ಮಾರುಕಟ್ಟೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯಿಂದಾಗಿ ಷೇರು ಮಾರುಕಟ್ಟೆಯ ಹೂಡಿಕೆಯ ವ್ಯಾಪ್ತಿಯು ಪ್ರಬಲವಾಗಿದೆ. ಭಾರತೀಯ ಷೇರು ಮಾರುಕಟ್ಟೆಯು ಚೀನಾಕ್ಕಿಂತ ಹೆಚ್ಚು ಆಕರ್ಷಕ ಹೂಡಿಕೆಯ ಆಯ್ಕೆಯಾಗಿದೆ. ಭಾರತದ ಆರ್ಥಿಕತೆಯ ವೇಗ, ಭಾರತೀಯ ಕಂಪನಿಗಳ ಹೆಚ್ಚುತ್ತಿರುವ ವಹಿವಾಟು, ಐಪಿಒ ಇತ್ಯಾದಿಗಳು ಪ್ರಪಂಚದ ಅನೇಕ ದೇಶಗಳ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ.