ಬೆಂಗಳೂರು : ರಾಜ್ಯದ ರೈತರಿಗೆ ಮತ್ತೊಂದು ಶಾಕ್, ಹಿಂಗಾರಿನಲ್ಲೂ ರಾಜ್ಯದಲ್ಲಿ ಶೇ. 65 ರಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಈ ಮೂಲಕ ರೈತರು, ಜನಸಾಮಾನ್ಯರಿಗೆ ಆತಂಕಕ್ಕೆ ಕಾರಣವಾಗಿದೆ.
ಮುಂಗಾರು ಅವಧಿಯಲ್ಲಿ ಕರ್ನಾಟಕಕ್ಕೆ ವಾಡಿಕೆ ಪ್ರಕಾರ 85.2 ಸೆಂ.ಮೀ ಮಳೆಯಾಗಬೇಕು. ಆದರೆ ಈ ಬಾರಿ ಕೇವಲ 63.5 ಸೆಂ.ಮೀ ಮಳೆಯಾಗಿದ್ದು, ಶೇ. 25 ರಷ್ಟು ಮಳೆ ಕೊರತೆಯಾಗಿದೆ. ಇತ್ತ ಹಿಂಗಾರು ಅವಧಿಯಲ್ಲಿ ಶೇ. 65 ರಷ್ಟು ಮಳೆ ಕೊರತೆಯಾಗಿದ್ದು, ರೈತರು ಮತ್ತು ಜನಸಾಮಾನ್ಯರಿಗೆ ಆತಂಕಕ್ಕೀಡು ಮಾಡಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಶೇ. 91 ರಷ್ಟು ಹಿಂಗಾರು ಮಳೆ ಕೊರತೆಯಾಗಿದ್ದು, ಇದು ಕಳೆದ 53 ವರ್ಷದ ಮಹಾ ಕೊರತೆಯಾಗಿದೆ. ಹಿಂಗಾರು ಆರಂಭವಾಗಿ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 12.1 ಸೆಂ.ಮೀ. ನಷ್ಟು ಮಳೆಯಾಗಬೇಕಿತ್ತು. ಆದರೆ ಕೇವಲ 4.2 ಸೆಂ.ಮೀ. ನಷ್ಟು ಮಾತ್ರ ಮಳೆಯಾಗಿದೆ.