ಬೆಂಗಳೂರು : ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಈರುಳ್ಳಿ ಸೇರಿದಂತೆ ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ದೀಪಾವಳಿಗೂ ಮುನ್ನ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಇಳುವರಿ ಕುಸಿತ ಕಂಡ ಪರಿಣಾಮ ಆಹಾರ ಧಾನ್ಯಗಳು ಹಾಗೂ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ತೊಗರಿ ಬೇಳೆ, ಹೆಸರು, ಉದ್ದಿನ ಬೇಳೆ, ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಲೆ ಶೇ. 30 ರಷ್ಟು ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಸಿರಿಧಾನ್ಯಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದ್ದು, ರಾಗಿ, ಬರಗು, ನವಣೆ, ಸಾಮೆ, ಅರ್ಕ, ಕೊರಲೆ, ಸಜ್ಜೆ ಸೇರಿದಂತೆ ಹಲವು ಧಾನ್ಯಗಳ ಬೆಲೆ ಗಗನಕ್ಕೇರಿದೆ. ಕಳೆದ ವರ್ಷ ಕೆಜಿ ಈರುಳ್ಳಿ 30 ರೂ. ಇದ್ದದ್ದು, ಈಗ 70 ರೂ.ಗೆ ಏರಿಕೆ ಕಂಡರೆ, ಅಕ್ಕಿ ಕೆಜಿಗೆ 46 ರೂ. ಇದ್ದದ್ದು, 52 ರೂ.ಗೆ ಏರಿಕೆಯಾಗಿದೆ. ತೊಗರಿ ಬೇಳೆ 120 ರೂ. ಇದ್ದದ್ದು 180 ರೂ.ಗೆ ಏರಿಕೆಯಾಗಿದೆ. ಹಾಲು ಕಳೆದ ವರ್ಷ ಲೀಟರ್ ಗೆ 45 ರೂ. ಇದ್ದದ್ದು, ಈಗ 50 ರೂ.ಗೆ ಏರಿಕೆಯಾಗಿದೆ. ಗೋದಿ ಹಿಟ್ಟು ಸಹ ಏರಿಕೆಯಾಗಿದ್ದು, 35 ರೂ.ನಿಂದ 42 ರೂ. ಆಗಿದೆ.