ಬೆಂಗಳೂರು : ಕಾಯಂ ನಿರೀಕ್ಷೆಯಲ್ಲಿದ್ದ ಆಶಾ ಕಾರ್ಯಕರ್ತೆಯರಿಗೆ ಸಚಿವ ದಿನೇಶ್ ಗುಂಡೂರಾವ್ ಬಿಗ್ ಶಾಕ್ ನೀಡಿದ್ದು, ಆಶಾ ಕಾರ್ಯಕರ್ತೆಯರ ಸೇವೆ ಕಾಯಂ ಅಸಾಧ್ಯ ಎಂದು ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಜೆಡಿಎಸ್ ನ ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಈಗಿರುವ ನಿಯಮಾವಳಿ ಪ್ರಕಾರ ಆಶಾ ಕಾರ್ಯಕರ್ತರ ಸೇವೆಯನ್ನು ಕಾಯಂ ಮಾಡಲು ಬರುವುದಿಲ್ಲ. ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪೂರ್ಣವಧಿ ಅಥವಾ ಅರೆಕಾಲಿಕ ನೌಕರರಲ್ಲ. ಆದರೆ ಅವರಿಗೆ ಕಾರ್ಯನಿರ್ವಹಣೆ ಆಧಾರದ ಮೇಲೆ ಗೌರವಧನ ಹಾಗೂ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ನಿಶ್ಚಿತ ಮಾಸಿಕ 5 ಸಾವಿರ ರೂ. ನೀಡಲಾಗುತ್ತದೆ. ಒಟ್ಟಾರೆ ಮಾಸಿಕ 10 ರಿಂದ 13 ಸಾವಿರ ರೂ. ದೊರೆಯುತ್ತದೆ. ಜೊತೆಗೆ ಸ್ಮಾರ್ಟ್ ಫೋನ್ ಹಾಗೂ ರೀಚಾರ್ಜ್ ಮೊತ್ತವನ್ನು ಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.