ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದ್ದು, ಫಲಾನುಭವಿಗಳಿಗೆ 5 ಅಕ್ಕಿ ಜೊತೆಗೆ 5 ಕೆಜಿ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿ ಖಾತೆಗೆ 2,000 ರೂ. ಗಳನ್ನು ನೀಡುತ್ತಿದೆ.
ಈ ನಡುವೆ ಒಂದೇ ಕುಟುಂಬದ ಬಳಿ 2-3 ಹೆಚ್ಚುವರಿ ಪಡಿತರ ಚೀಟಿ ಇದ್ದರೆ ಸರ್ಕಾರ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಹೀಗಾಗಿ ಹಣ ಪೋಲಾಗದಂತೆ ತಡೆಗಟ್ಟಲು ರಾಜ್ಯ ಸರ್ಕಾರವು ಪಡಿತರ ವಿಭಜನೆ ಮಾಡದಂತೆ ತಡೆಯಲು ಮಹತ್ವದ ಕ್ರಮ ಕೈಗೊಂಡಿದ್ದು, ಒಂದು ಕುಟುಂಬಕ್ಕೆ ಒಂದೇ ಪಡಿತರ ಚೀಟಿ ನೀಡುವಂತೆ ಆಹಾರ ಇಲಾಖೆಗೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ 1.2 ಕೋಟಿ ಕುಟುಂಬದ ಬಳಿ ಬಿಪಿಎಲ್ ಕಾರ್ಡ್ ಇದ್ದು, ಇವುಗಳಲ್ಲಿ ಹೆಚ್ಚಾಗಿ ಒಂದೇ ಕುಟುಂಬದಲ್ಲಿ 2-3 ಪಡಿತರ ಚೀಟಿ ಹೊಂದಿರುವುದು ಕಂಡುಬಂದಿದೆ. ಹೀಗಾಗಿ ಒಂದೇ ಕುಟುಂಬದಲ್ಲಿ 2 ಕ್ಕಿಂತ ಹೆಚ್ಚು ಪಡಿತರ ಚೀಟಿಯಿಂದ ಸರ್ಕಾರದ ಲಾಭ ಪಡೆಯುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಒಂದೇ ಕುಟುಂಬಕ್ಕೆ ಒಂದೇ ಪಡಿತರ ಚೀಟಿ ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಯೋಜನೆಗಳ ಪೈಕಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ರೇಷನ್ ಕಾರ್ಡ್ ಮುಖ್ಯವಾಗಿ ಅವಶ್ಯವಾಗಿದೆ. ಹೀಗಾಗಿ ಯೋಜನೆಯ ಲಾಭ ಪಡೆಯಲು ಒಂದೇ ಕುಟುಂಬದಲ್ಲಿ ರೇಷನ್ ಕಾರ್ಡ್ ಬೇರೆ ಬೇರೆ ಮಾಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿದಾರರ ಪಟ್ಟಿ ಮಾಡಿ ಕಾರ್ಡ್ ಗಳನ್ನು ರದ್ದು ಮಾಡಿದೆ.
ರಾಜ್ಯ ಸರ್ಕಾರದ ಯೋಜನೆಗೆ ಹೆಚ್ಚಿನ ಫಲಾನುಭವಿಗಳು ಸೇರ್ಪಡೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಒಂದೇ ಕುಟುಂಬದಲ್ಲಿ ಎರಡು, ಮೂರು ರೇಷನ್ ಕಾರ್ಡ್ ವಿಭಜನೆಗೆ ಅವಕಾಶ ನೀಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದೆ. ಈ ಮೂಲಕ ಅತ್ತೆಗೊಂದು ರೇಷನ್ ಕಾರ್ಡ್, ಸೊಸೆಗೊಂದು ರೇಷನ್ ಕಾರ್ಡ್ ಪ್ರತ್ಯೇಕ ಮಾಡಿಸಿ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ಎದುರಾಗಿದೆ.