ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆಯಾದರೂ ಸಹ ತಿಂಗಳುಗಳಿಂದಲೂ ಕರ್ತವ್ಯಕ್ಕೆ ಹಾಜರಾಗದ 40ಕ್ಕೂ ಅಧಿಕ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಬಿಸಿ ಮುಟ್ಟಿಸಲು ಇಲಾಖೆಯ ಉನ್ನತ ಅಧಿಕಾರಿ ಮುಂದಾಗಿದ್ದಾರೆ. ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ 44 ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಇದೀಗ ಆಡಳಿತ ವಿಭಾಗದ ಎಡಿಜಿಪಿ ಸೌಮೇಂದು ಮುಖರ್ಜಿ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವರ್ಗಾವಣೆಗೊಂಡಿರುವ ಬಹುತೇಕ ಇನ್ಸ್ಪೆಕ್ಟರ್ ಗಳು ಅನಾರೋಗ್ಯ, ದೀರ್ಘ ರಜೆ ಮೊದಲಾದ ಕಾರಣಗಳನ್ನು ಕೊಟ್ಟು ತಾವು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲವೆಂದು ಹೇಳಲಾಗಿದ್ದು, ಇದರಿಂದಾಗಿ ಅಂತಹ ಠಾಣೆಗಳ ಕಾರ್ಯಕ್ಷಮತೆ ಕುಂಠಿತಗೊಂಡಿತ್ತು. ಅಲ್ಲದೆ ಜನಪ್ರತಿನಿಧಿಗಳು ಸಹ ತಮ್ಮ ಕ್ಷೇತ್ರದಲ್ಲಿ ಇನ್ಸ್ಪೆಕ್ಟರ್ ಹುದ್ದೆ ಖಾಲಿ ಇರುವುದರ ಕುರಿತು ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ 44 ಇನ್ಸ್ಪೆಕ್ಟರ್ ಗಳಿಗೆ ನೋಟಿಸ್ ನೀಡಿರುವ ಆಡಳಿತ ವಿಭಾಗದ ಎಡಿಜಿಪಿ ಸೌಮೇಂದು ಮುಖರ್ಜಿ, ಮುಂದಿನ ಏಳು ದಿನಗಳಲ್ಲಿ ನಿಯುಕ್ತಿಗೊಂಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕರ್ತವ್ಯ ಲೋಪ ಆರೋಪದ ಮೇರೆಗೆ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.