ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಶೇಕಡಾ 80 ರಷ್ಟು ಬಿಪಿಎಲ್ ಕುಟುಂಬಗಳಿದ್ದು, ಆದರೆ ಬಹುತೇಕರು ಸುಳ್ಳು ಮಾಹಿತಿ ನೀಡಿ ಈ ಕಾರ್ಡ್ ಪಡೆದುಕೊಂಡು ಸೌಲಭ್ಯ ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣ ಅಂತವರನ್ನು ಗುರುತಿಸಿ ಕಾರ್ಡ್ ರದ್ದುಗೊಳಿಸಲು ತೀರ್ಮಾನಿಸಲಾಗಿದೆ.
ಸೋಮವಾರದಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತಂತೆ ಖಡಕ್ ಸೂಚನೆ ನೀಡಿದ್ದಾರೆ. ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಅಂತಹ ಕಾರ್ಡ್ ಗಳನ್ನು ರದ್ದುಗೊಳಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 1.27 ಕೋಟಿ ಬಿಪಿಎಲ್ ಕುಟುಂಬಗಳಿದ್ದು, 4.37 ಕೋಟಿ ಜನ ಇದರ ಸೌಲಭ್ಯ ಪಡೆಯುತ್ತಿದ್ದಾರೆ. ಪಕ್ಕದ ತಮಿಳುನಾಡಿನಲ್ಲಿ ಬಿಪಿಎಲ್ ಕುಟುಂಬಗಳ ಪ್ರಮಾಣ ಶೇಕಡ 40ರಷ್ಟಿದ್ದು ಕರ್ನಾಟಕದಲ್ಲಿ ಈ ಪ್ರಮಾಣ ಶೇಕಡ 80ರಷ್ಟಿದೆ. ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ ಬಿಪಿಎಲ್ ಕಾರ್ಡ್ ಅತಿ ಹೆಚ್ಚಿರುವುದು ಏಕೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಹೊಸ ಕಾರ್ಡ್ ಗಳಿಗಾಗಿ 2.95 ಲಕ್ಷ ಅರ್ಜಿಗಳು ಬಂದಿದ್ದು ಅನರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಹೊಸ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಹೇಳಿದರು.