ಬೆಂಗಳೂರು : ಅಶ್ಲೀಲ ವಿಡಿಯೋ, ಅತ್ಯಾಚಾರ ಹಾಗೂ ಕಿಡ್ನ್ಯಾಪ್ ಪ್ರಕರಣಗಳನ್ನು ಎದುರಿಸುತ್ತಿರುವ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಕುಟುಂಬಕ್ಕೆ ಇಂದು ಮಹತ್ವದ ದಿನವಾಗಿದೆ. ಮೂವರಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಹಾಗೂ ಹೈಕೋರ್ಟ್ನಲ್ಲಿ ನಡೆಯಲಿದೆ.
ಹೌದು, ಜೆಡಿಎಸ್ ನಾಯಕರಾದ ಹೆಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣಗೆ ಇಂದು ಮಹತ್ವದ ದಿನವಾಗಿದೆ. ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ನೀಡಿರುವ ಜಾಮೀನು ರದ್ದು ಕೋರಿ ಎಸ್ ಐ ಟಿ ಅಧಿಕಾರಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೆಚ್.ಡಿ ರೇವಣ್ಣಗೆ ಜಾಮೀನು ನೀಡಬಾರದು, ಈಗ ನೀಡಿರುವ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಅದೇ ರೀತಿ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಜಾಮೀನು ವಿಚಾರಣೆ ಇಂದು ನಡೆಯಲಿದ್ದು, ಕೋರ್ಟ್ ಇಂದು ವಾದ ವಿವಾದಗಳನ್ನು ಆಲಿಸಿ ತೀರ್ಪು ಪ್ರಕಟಿಸಲಿದೆ. ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಭವಾನಿ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶ ಇಂದು ಹೊರಬೀಳಲಿದೆ. ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಹೆಚ್ಡಿ ರೇವಣ್ಣಗೆ ಜಾಮೀನು ಸಿಕ್ಕಿದರೂ ಅದನ್ನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.