ನವದೆಹಲಿ : ಕಾರು ಕೊಳ್ಳುವವರಿಗೆ ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಬಿಗ್ ಶಾಕ್ ನೀಡಿದ್ದು, ಹೊಸ ವರ್ಷಕ್ಕೆ ವಾಹನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಮಾರುತಿ ಸುಜುಕಿ, ಮಹಿಂದ್ರಾ, ಅಡಿ ಇಂಡಿಯಾ ಕಂಪನಿಗಳು ತಿಳಿಸಿವೆ.
ಹಣದುಬ್ಬರ ಮತ್ತು ಉತ್ಪಾದಕ ವೆಚ್ಚಗಳ ಏರಿಕೆಯಿಂದಾಗಿ ಕಾರುಗಳ ದರ ಹೆಚ್ಚಳ ಮಾಡಲು ಮಾರುತಿ ಸುಜುಕಿ, ಮಹಿಂದ್ರಾ, ಅಡಿ ಇಂಡಿಯಾ ಕಂಪನಿಗಳು ಮುಂದಾಗಿವೆ.
ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ, ಆರಂಭಿಕ ಹಂತದ ಸಣ್ಣ ಕಾರು ಆಲ್ಟೋದಿಂದ ಮಲ್ಟಿ ಯುಟಿಲಿಟಿ ವೆಹಿಕಲ್ ಇನ್ ಇಕ್ಟೋ ತನಕ ನಾನಾ ಶ್ರೇಣಿ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಜನವರಿಯಿಂದ ದರ ಏರಿಕೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಸರಕುಗಳ ದರಗಳ ಮೇಲೆ ಹಣದುಬ್ಬರದ ಒತ್ತಡದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಕಾರುಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಮಾರುತಿ ಸುಜುಕಿ ಈ ವರ್ಷದ ಏಪ್ರಿಲ್ ನಲ್ಲಿ ವಾಹನ ಬೆಲೆಯನ್ನು ಶೇ. 0.8 ರಷ್ಟು ಹೆಚ್ಚಿಸಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು ಶೇ. 2.4 ರಷ್ಟು ಬೆಲೆ ಏರಿಕೆ ಮಾಡಿತ್ತು.