ಬೆಂಗಳೂರು : ಕಾಂಕ್ರೀಟ್ ನಗರಿ ಬೆಂಗಳೂರಿನಲ್ಲಿ ಎಲ್ಲವೂ ದುಬಾರಿಯೇ. ಜನಸಾಮಾನ್ಯರು, ಕಡಿಮೆ ಸಂಬಳ ಪಡೆಯುವವರು ಬೆಂಗಳೂರಿನಲ್ಲಿ ಬದುಕು ಸಾಗಿಸುವುದು ಬಹಳ ಕಷ್ಟ. ದಿನನಿತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಬೆಂಗಳೂರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಹೌದು. ಬೆಂಗಳೂರಿನಲ್ಲಿ ಬಾಡಿಗೆ ಮನೆ, ಆಸ್ತಿ ದರ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೆಚ್ಚುತ್ತಿರುವ ದಿನನಿತ್ಯ ವಸ್ತುಗಳ ಬೆಲೆಗಳ ನಡುವೆ ಪೂರ್ವ ಬೆಂಗಳೂರಿನ ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ಸುತ್ತಮುತ್ತಲಿನ ಆಸ್ತಿ ಬೆಲೆಗಳು ಮತ್ತು ಬಾಡಿಗೆಗಳನ್ನು ಏರಿಕೆ ಮಾಡಲಾಗಿದೆ. ವಿವಿಧೆಡೆ ಮನೆಗಳ ಬಾಡಿಗೆಗಳಲ್ಲಿ ಕನಿಷ್ಠ ಶೇಕಡಾ 20ರಷ್ಟು ಹೆಚ್ಚಳ ಮತ್ತು ಆರು ತಿಂಗಳಲ್ಲಿ ಆಸ್ತಿ ಬೆಲೆಗಳಲ್ಲಿ ಶೇಕಡಾ 30ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಹೇಳಲಾಗಿದೆ.
ನಗರದ ಪ್ರಮುಖ ಕಡೆ 6 ತಿಂಗಳ ಹಿಂದೆಯಷ್ಟೇ ಆಸ್ತಿಗಳ ಬೆಲೆಯು ಚದರ ಅಡಿಗೆ 7,000 ರೂಪಾಯಿಯಷ್ಟಿತ್ತು. ಆದರೆ ಇದೀಗ ಅದರ ಬೆಲೆ 11,000 ರೂ.ನಷ್ಟಕ್ಕೆ ಏರಿಕೆ ಆಗಿದೆ. ನಗರದಲ್ಲಿ ಮನೆ ಬಾಡಿಗೆ ಮಾಲೀಕರು ವಾರ್ಷಿಕವಾಗಿ ಶೇಕಡಾ 5ರಿಂದ 10ರಷ್ಟು ಬಾಡಿಗೆ ಹೆಚ್ಚಳ ಮಾಡ್ತಿದ್ದರು. ಈ ವರ್ಷ ದಿಢೀರನೇ ಶೇ 20ರಷ್ಟು ಏರಿಸಲು ಬೇಡಿಕೆ ಇಡುತ್ತಿದ್ದಾರೆ ಎಂದು ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ. ಇದಲ್ಲದೇ ಬೆಂಗಳೂರಿನ ಪಿಜಿಗಳಲ್ಲಿ ಕೂಡ ದರ ಹೆಚ್ಚಳ ಮಾಡಲಾಗಿದ್ದು, ಒಬ್ಬರಿಗೆ 6 ರಿಂದ 7 ಸಾವಿರ ಪಡೆಯಲಾಗುತ್ತಿದೆ.