ಬೆಂಗಳೂರು : ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬಿಯರ್ ದರ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೌದು. ಅ.1 ರಿಂದ ರಾಜ್ಯದಲ್ಲಿ ಬಿಯರ್ ಬೆಲೆ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಬಿಯರ್ ದರ ಹೆಚ್ಚಳಕ್ಕೆ ಸರ್ಕಾರದಿಂದ ಕರಡು ಹೊರಡಿಸಲಾಗಿದೆ.. ಪ್ರತಿ ಬಾಟಲ್ ಬಿಯರ್ ಮೇಲೆ ಬರೋಬ್ಬರಿ 10 ರೂ.ಗಳಿಂದ 12 ರೂ.ಗಳವರೆಗೆ ದರ ಹೆಚ್ಚಳ ಮಾಡಲು ತೀರ್ಮನಿಸಲಾಗಿದೆ. ಪ್ರತಿ ಬಿಯರ್ ಸ್ಲ್ಯಾಬ್ ಗಳ ಮೇಲೆ ದರ ಏರಿಕೆ ಮಾಡಲು ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಆಗಸ್ಟ್ 23ರಂದು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿ 15 ದಿನ ಕಾಲಾವಕಾಶ ನೀಡಿತ್ತು. ಹೀಗಾಗಿ ಶೀಘ್ರವೇ ದರ ಹೆಚ್ಚಳಕ್ಕೆ ಅಸ್ತು ಎಂದಿದ್ದು, ಬಿಯರ್ ಬಾಟಲ್ ಗೆ 10-12 ರೂ.ವರೆಗೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಬಿಯರ್ ದರ ಹೆಚ್ಚಳವಾದಂತಾಗುತ್ತದೆ.
ದರ ಹೆಚ್ಚಳ ಮಾಡಿದ ನಂತರ ಎಲ್ಲ ಬಿಯರ್ಗಳನ್ನು ಮೂರು ಸ್ಲ್ಯಾಬ್ಗಳನ್ನಾಗಿ ಮಾಡಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.ಕರ್ನಾಟಕದಲ್ಲಿ ಉದ್ದೇಶಿತ ಮದ್ಯದ ಬೆಲೆ ಪರಿಷ್ಕರಣೆಯು ಭಾರತೀಯ ನಿರ್ಮಿತ ಮದ್ಯ ಮಾರಾಟ ಮತ್ತು ಅಬಕಾರಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.