
ತುಮಕೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ತೆಂಗಿನಕಾಯಿ ದರ ಬಲು ದುಬಾರಿಯಾಗಿದೆ.
ಒಂದು ತೆಂಗಿನ ಕಾಯಿ ದರ 70 ರೂಪಾಯಿಗೆ ಏರಿಕೆಯಾಗಿದೆ. ಕ್ವಿಂಟಲ್ ಕೊಬ್ಬರಿ ಧಾರಣೆ 19,000 ರೂ. ಗಡಿ ದಾಟಿದ್ದು, ಯುಗಾದಿ ಹಬ್ಬದ ವೇಳೆಯಲ್ಲೇ ತೆಂಗಿನಕಾಯಿ ದರ ಕೂಡ ಬಲು ದುಬಾರಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ದಪ್ಪ ಗಾತ್ರದ ಒಂದು ತೆಂಗಿನಕಾಯಿ 65 ರಿಂದ 70 ರೂಪಾಯಿವರೆಗೆ ಮಾರಾಟವಾಗಿದ್ದು, ಇದುವರೆಗೆ ದಾಖಲೆಯ ಬೆಲೆ ಎಂದು ಹೇಳಲಾಗಿದೆ.
ಮಧ್ಯಮ ಗಾತ್ರದ ತೆಂಗಿನ ಕಾಯಿ 50 ರಿಂದ 60 ರೂಪಾಯಿ, ಸಣ್ಣ ಗಾತ್ರದ ತೆಂಗಿನಕಾಯಿ 25 ರಿಂದ 40 ರೂಪಾಯಿಗೆ ಮಾರಾಟವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಕೊಯ್ಲು ಮಾಡಲಾಗುತ್ತಿದೆ. ಅಲ್ಲದೆ, ತೆಂಗಿನ ಕಾಯಿ ಉತ್ಪಾದನೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ತೆಂಗಿನಕಾಯಿ ದರ ಭಾರಿ ಏರಿಕೆ ಕಂಡಿದೆ. ಎಳನೀರಿಗೂ ಉತ್ತಮ ಬೆಲೆ ಬಂದಿದೆ. ಎಳನೀರು ದರ 50 ರಿಂದ 60 ರೂಪಾಯಿಗೆ ಏರಿಕೆಯಾಗಿದೆ. ತೋಟಗಳಿಗೆ ಬರುವ ವರ್ತಕರು 40 ರೂ.ಗೆ ಎಳನೀರು ಖರೀದಿಸುತ್ತಿದ್ದಾರೆ.