ಕಾಸರಗೋಡಿನಲ್ಲಿ ಭಾರೀ ದುರಂತವೊಂದು ನಡೆದು ಹೋಗಿದೆ. ಇಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಶೋರ್ಮಾ ತಿಂದಿದ್ದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇನ್ನೂ 58 ಮಂದಿ ಅಸ್ವಸ್ಥರಾಗಿದ್ದಾರೆ. ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಫುಡ್ ಫಾಯ್ಸನಿಂಗ್ ಸಂಭವಿಸಿದೆ ಎಂದು ಕಾಸರಗೋಡಿನ ಜಿಲ್ಲಾ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಶೋರ್ಮಾ ತಿಂದು ಅಸ್ವಸ್ಥರಾಗಿದ್ದವರನ್ನು ಕೋಜಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ರಕ್ತ ಹಾಗೂ ಮಲದ ಮಾದರಿಯನ್ನು ಪರೀಕ್ಷೆ ಮಾಡಿದಾಗ, ಅದರಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಮೃತಪಟ್ಟ ಬಾಲಕಿಯನ್ನು 16 ವರ್ಷದ ದೇವನಂದ ಎಂದು ಗುರುತಿಸಲಾಗಿದೆ.
ನೈರ್ಮಲ್ಯದ ಕೊರತೆ, ಆಹಾರವನ್ನು ಸರಿಯಾಗಿ ಬೇಯಿಸದೇ ಇರುವುದು, ಕಲುಷಿತ ಆಹಾರ ಮತ್ತು ನೀರಿನಿಂದ ಶಿಗೆಲ್ಲಾ ಬ್ಯಾಕ್ಟೀರಿಯಾ ಹರಡುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಬ್ಯಾಕ್ಟೀರಿಯಾ ಕರುಳಿನ ಸೋಂಕಿಗೆ ಕಾರಣವಾಗುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡಬಲ್ಲ ಸಾಂಕ್ರಾಮಿಕ ಬ್ಯಾಕ್ಟೀರಿಯಾ ಇದು.
ಇದರಿಂದ ವಾಂತಿ, ಬೇಧಿ ಹಾಗೂ ಜ್ವರ ಬರುವ ಸಾಧ್ಯತೆ ಇರುತ್ತದೆ. ಕಾಸರಗೋಡಿನ ಈ ರೆಸ್ಟೋರೆಂಟ್‌ನಲ್ಲಿ ತಿನಿಸುಗಳನ್ನು ಸೇವಿಸಿದ್ದ ಬಹುತೇಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗ್ತಿದೆ.
ಈ ಘಟನೆ ಬಳಿಕ ಕೇರಳದಾದ್ಯಂತ ಹೋಟೆಲ್, ಢಾಬಾ ಸೇರಿದಂತೆ ಇತರ ಈಟರಿಗಳಲ್ಲಿ ಸ್ವಚ್ಛತೆಯ ಪಾಲನೆ ಮಾಡಲಾಗ್ತಿದ್ಯಾ ಎಂಬುದನ್ನು ತಪಾಸಣೆ ಮಾಡಲಾಗ್ತಾ ಇದೆ. ಹೋಟೆಲ್ ಮಾಲೀಕರು ಹಾಗೂ ಅಲ್ಲಿಗೆ ತೆರಳುವ ಗ್ರಾಹಕರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ವೈದ್ಯಾಧಿಕಾರಿಗಳು ಮನವಿ ಕೂಡ ಮಾಡಿದ್ದಾರೆ.