ಜನಸಾಮಾನ್ಯರಿಗೆ ದೊಡ್ಡ ರಿಲೀಫ್ ಕೊಡುವ ಸುದ್ದಿಯೊಂದರಲ್ಲಿ, ಕೋವಿಡ್-19 ಚಿಕಿತ್ಸಾ ವೆಚ್ಚಗಳನ್ನು ಭರಿಸುವ ವಿಮಾ ಯೋಜನೆಗಳು ಒಮಿಕ್ರಾನ್ ಸೋಂಕನ್ನೂ ಸಹ ಒಳಗೊಳ್ಳಲಿವೆ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ( ಐಆರ್‌ಡಿಎಐ) ತಿಳಿಸಿದೆ.
“ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸುವ ವಿಮಾ ಯೋಜನೆಗಳನ್ನು ಕೊಡುವ ಎಲ್ಲಾ ಆರೋಗ್ಯ ವಿಮೆಗಳು ಕೋವಿಡ್-19ನ ಒಮಿಕ್ರಾನ್ ರೂಪಾಂತರಿಯ ಸೋಂಕನ್ನು ಸಹ ಯೋಜನೆಯ ಕಾಂಟ್ರಾಕ್ಟ್ ಅನುಸಾರ ಷರತ್ತುಗಳು ಮತ್ತು ನಿಬಂಧನೆಗಳ ಅನ್ವಯ ಒಳಗೊಳ್ಳುತ್ತವೆ” ಎಂದು ಐಆರ್‌ಡಿಎಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
BIG NEWS: ಕೊರೊನಾ ʼವಿಮೆʼ ಕುರಿತು IRDAI ನಿಂದ ಮಹತ್ವದ ತೀರ್ಮಾನ
ಒಮಿಕ್ರಾನ್ ಸೋಂಕಿನ ಸಂಖ್ಯೆಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಈ ಸಂಬಂಧ ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಸೇವಾದಾರರಿಗೆ ಐಆರ್‌ಡಿಐ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದಕ್ಕಾಗಿ ತಮ್ಮೆಲ್ಲಾ ಜಾಲಗಳು ಮತ್ತು ಆಸ್ಪತ್ರೆಗಳ ಮೂಲಕ ಪಾಲಿಸಿದಾರರಿಗೆ ಸುಲಲಿತವಾಗಿ ವಿಮಾ ಸೇವೆಗಳ ಲಭ್ಯವಾಗಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ವಿಮಾ ಸೇವಾದಾರರಿಗೆ ಐಆರ್‌ಡಿಎಐ ಆದೇಶಿಸಿದೆ.
ಏಪ್ರಿಲ್ 2020ರಲ್ಲೂ ಸಹ, ಕೋವಿಡ್-19 ಸೋಂಕಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚಗಳನ್ನು ಭರಿಸುವ ವಿಮಾ ಉತ್ಪನ್ನಗಳನ್ನು ಒದಗಿಸುವ ಸಾಮಾನ್ಯ ಮತ್ತು ಆರೋಗ್ಯ ವಿಮಾ ಸೇವಾದಾರ ಕಂಪನಿಗಳು ತಂತಮ್ಮ ಗ್ರಾಹಕರಿಗೆ ಭರಿಸಿಕೊಡಲಿವೆ ಎಂದು ಐಆರ್‌ಡಿಎಐ ಘೋಷಿಸಿತ್ತು.