ನಿಮ್ಮ ಸಾಕು ನಾಯಿಯು ದೈತ್ಯಾಕಾರಿಯಾಗಿದ್ದು, ಆಕ್ರಮಣಶಾಲಿಯಾಗಿದ್ದರೆ ಅದನ್ನು ಆಚೆ ಕರೆದೊಯ್ಯುವ ಸಂದರ್ಭದಲ್ಲಿ ಚೈನ್ ಹಾಕಿ ಕರೆದೊಯ್ಯಬೇಕು. ಇಲ್ಲವಾದಲ್ಲಿ ನಾಯಿ ಮಾಡುವ ಅವಾಂತರಕ್ಕೆ ಮಾಲೀಕರೇ ಹೊಣೆಯಾಗುತ್ತಾರೆ.
ನ್ಯೂಯಾರ್ಕ್ನ ಮಹಿಳೆಯೊಬ್ಬರು ತಮ್ಮ ನಾಯಿಯನ್ನು ಚೈನ್ ಹಾಕದೇ ವಾಕಿಂಗ್ ಮಾಡಿಸುತ್ತಿದ್ದ ಕಾರಣ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಎರಡು ಆಸ್ಟ್ರೇಲಿಯನ್ ಶೆಪರ್ಡ್ ನಾಯಿಗಳನ್ನು ಚೈನ್ ಇಲ್ಲದೇ ನಗರದ ಮ್ಯಾನ್ಹಟನ್ ಪ್ರದೇಶದ ರಿವರ್ಸೈಡ್ ಪಾರ್ಕ್ನಲ್ಲಿ ವಾಕಿಂಗ್ ಮಾಡಿಸುತ್ತಿದ್ದ ಡೋರಾ ಮರ್ಚಂದ್ಗೆ ಉದ್ಯಾನದ ಅಧಿಕಾರಿ ವಾರ್ನಿಂಗ್ ಮಾಡಿದ್ದರು.
ಆದರೆ ಈ ವೇಳೆ ಡೋರಾಗೆ ತನ್ನ ಹೊಸ ಮನೆಯ ವಿಳಾಸ ನೆನಪಿಗೆ ಬರದೇ ಇದ್ದಿದ್ದಲ್ಲದೇ ತನ್ನ ಗುರುತಿನ ಚೀಟಿ ಹಾಗೂ ಫೋನ್ ಮನೆಯಲ್ಲೇ ಮರೆತಿದ್ದ ಕಾರಣ ಫಜೀತಿಗೆ ಸಿಲುಕಿದ್ದಾರೆ. ಸ್ಥಳಕ್ಕೆ ಬಂದ ಇನ್ನಷ್ಟು ಅಧಿಕಾರಿಗಳು ವಿದ್ಯುತ್ ಸ್ಟಿಕ್ಗಳು ಹಾಗೂ ಬೋನುಗಳನ್ನು ತಂದಿದ್ದಾರೆ. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಡೋರಾ ಬಾಯ್ಫ್ರೆಂಡ್ ಆಕೆಯ ಐಡಿ ಹಾಗೂ ಚೈನ್ ತಂದಿದ್ದಾರೆ. ಇಷ್ಟೆಲ್ಲಾ ಆದರೂ ಡೋರಾರನ್ನು ಠಾಣೆಗೆ ಕರೆದೊಯ್ಧ ಪೊಲೀಸರು ಆಕೆಗೆ $525 ದಂಡ ವಿಧಿಸಿದ್ದಾರೆ.