alex Certify BIG NEWS : ರಾಜ್ಯದಲ್ಲಿ ‘ಜಾತಿ ಗಣತಿ’ ವರದಿ ಅನುಷ್ಟಾನ ಮಾಡುತ್ತೇವೆ : CM ಸಿದ್ದರಾಮಯ್ಯ ಪುನರುಚ್ಚಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದಲ್ಲಿ ‘ಜಾತಿ ಗಣತಿ’ ವರದಿ ಅನುಷ್ಟಾನ ಮಾಡುತ್ತೇವೆ : CM ಸಿದ್ದರಾಮಯ್ಯ ಪುನರುಚ್ಚಾರ..!

ಬೆಂಗಳೂರು : ಜಾತಿ ಗಣತಿ ಬಗ್ಗೆ ತಕರಾರು ಇಲ್ಲ ಎಂದು ಹೇಳುತ್ತಿರುವ ಆರ್. ಅಶೋಕ್ ಅವರೇ ನೀವು ಇದೇ ಮಾತನ್ನು ಪ್ರಧಾನಿ ಮೋದಿ ಅವರಿಗೆ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಜನಗಣತಿಯ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವಂತೆ ಒತ್ತಡ ಹೇರಿ, ನಿಮ್ಮ ಬದ್ದತೆ ಮತ್ತು ಸತ್ಯಸಂಧತೆಯನ್ನು ಸಾಬೀತುಪಡಿಸಿ. ಇಲ್ಲದೆ ಇದ್ದರೆ ನೀವು ಕೂಡಾ ಇತ್ತೀಚೆಗೆ ನಿಮ್ಮ ಮೇಲೆ ಬಂದಿರುವ ಆರೋಪಗಳಿಂದ ತಪ್ಪಿಸಿಕೊಳ್ಳಲು ವಿನಾಕಾರಣ ಜಾತಿ ಜನಗಣತಿಯ ವಿವಾದವನ್ನು ಪ್ರಸ್ತಾಪಿಸುತ್ತಿದ್ದೀರಿ ಎಂದು ಆರೋಪಿಸಬೇಕಾಗುತ್ತದೆ.

ಜಾತಿ ಗಣತಿ ಬಗ್ಗೆ ನನ್ನ ಬದ್ಧತೆಯನ್ನು ಪ್ರಶ್ನಿಸುತ್ತಿರುವ ಆರ್ ಅಶೋಕ್ ಅವರು, ತಮ್ಮ ಪಕ್ಷ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿಯೂ ಜಾತಿಗಣತಿ ನಡೆಸುವ ಧೈರ್ಯವನ್ನು ಯಾಕೆ ಮಾಡಿಲ್ಲ? ಎನ್ನುವ ಪ್ರಶ್ನೆಗೆ ಉತ್ತರಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಜಾತಿಗಣತಿ ನಡೆಸುವುದನ್ನು ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸಿದೆ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮತ್ತೆ ಮತ್ತೆ ಅದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಬಿಜೆಪಿ ಪಕ್ಷಕ್ಕೆ ಜಾತಿಗಣತಿ ಬಗ್ಗೆ ತಕರಾರು ಇಲ್ಲದೆ ಇದ್ದರೆ ಪಕ್ಷದ ನಾಯಕರು ಯಾಕೆ ಇದಕ್ಕೆ ಸಹಮತ ವ್ಯಕ್ತಪಡಿಸದೆ ಅವರನ್ನು ಟೀಕಿಸುತ್ತಿದ್ದಾರೆ. ಮೀಸಲಾತಿ ಬಗ್ಗೆಯಾಗಲಿ, ಒಟ್ಟು ಸಾಮಾಜಿಕ ನ್ಯಾಯದ ಬಗ್ಗೆಯಾಗಲಿ ಭಾರತೀಯ ಜನತಾ ಪಕ್ಷ ಮತ್ತು ಆರ್ ಎಸ್ ಎಸ್ ನಿಲುವು ಏನು ಎನ್ನುವುದನ್ನು ದೇಶದ ಜನತೆ ಅರ್ಥಮಾಡಿಕೊಂಡಿದ್ದಾರೆ. ನೀವು ಯಾವ ವೇಷ ಧರಿಸಿ, ಬಣ್ಣ ಬಳಿದುಕೊಂಡು ಮಾತನಾಡಿದರೂ ನಿಮ್ಮ ಆಂತರ್ಯದ ಅಭಿಪ್ರಾಯ ಏನೆಂಬುದು ಜನರಿಗೆ ತಿಳಿದಿದೆ.

ಜಾತಿಗಣತಿಯನ್ನು ರಾಜಕೀಯ ದಾಳವಾಗಿ ಬಳಸುವುದು ದಲಿತರು ಮತ್ತು ಹಿಂದುಳಿದವರಿಗೆ ಮಾಡುವ ಅವಮಾನವಲ್ಲವೇ ಎಂದುಆರ್ ಅಶೋಕ್ ಅವರು ಅಮಾಯಕರಂತೆ ಪ್ರಶ್ನಿಸಿದ್ದಾರೆ.ಸನ್ಮಾನ್ಯ ಅಶೋಕ್ ಅವರೇ, ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ, ಇದು ಕೇವಲ ಜಾತಿ ಜನಗಣತಿ ಅಲ್ಲ, ಇದು ಸರ್ವರ ಒಳಿತಿಗಾಗಿ ನಡೆಸಲಾದ ರಾಜ್ಯದ ಏಳು ಕೋಟಿ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದನ್ನು ಇಲ್ಲಿಯ ವರೆಗೆ ದಲಿತರಾಗಲಿ, ಹಿಂದುಳಿದ ಜಾತಿಯವರಾಗಲಿ ವಿರೋಧಿಸಿಲ್ಲ. ಹೀಗಿರುವಾಗ ಅವರಿಗೆ ಅವಮಾನವಾಗಿದೆ ಎಂದು ಹೇಗೆ ಹೇಳುತ್ತೀರಿ? ಜಾತಿ ಜನಗಣತಿ ವಿರುದ್ಧ ತಳ ಸಮುದಾಯಗಳನ್ನು ಎತ್ತಿಕಟ್ಟುವ ಉದ್ದೇಶ ನಿಮ್ಮದಾಗಿದ್ದರೆ ನಿಮಗೆ ನಿರಾಶೆ ಖಚಿತ. ಜಾತಿ ಗಣತಿ ನನ್ನ ಕನಸಿನ ಕೂಸು ಎಂದು ಹೇಳಲು ಯಾವ ಹಿಂಜರಿಕೆಯೂ ಇಲ್ಲ. 1992ರಲ್ಲಿ ಸುಪ್ರೀಂ ಕೋರ್ಟ್ ಮಂಡಲ ವರದಿಗೆ ಸಂಬಂಧಿಸಿದಂತೆ ನೀಡಿದ್ದ ಆದೇಶದಲ್ಲಿ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗವನ್ನು ರಚಿಸಿ, ಕಾಲಕಾಲಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿತ್ತು. ಇದರಂತೆ 1995ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಜಾತಿಗಳ ಆಯೋಗವನ್ನು ರಚಿಸಿದ್ದೆ. 2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸಮಸ್ತ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಆದೇಶ ನೀಡಿದ್ದೆ. ಇದು ದೇಶದಲ್ಲಿಯೇ ಪ್ರಥಮ ಪ್ರಯತ್ನ ಎಂದು ಹೇಳಲು ನನಗೆ ಹೆಮ್ಮೆಯಿದೆಕಾಂತರಾಜ್ ಆಯೋಗ ನಡೆಸಿದ್ದ ಜಾತಿಗಣತಿಯ ವರದಿ ಇಲ್ಲಿಯ ವರೆಗೆ ಬಿಡುಗಡೆಯಾಗಿಲ್ಲ. ನಾನು ಕೂಡಾ ಅದನ್ನು ಓದಿಲ್ಲ. ಹೀಗಿರುವಾಗ @RAshokaBJPಅವರು ವರದಿ ಬಿಡುಗಡೆಯಾಗುವ ಮೊದಲೇ ಅದು ವೈಜ್ಞಾನಿಕವಾಗಿ ನಡೆದಿಲ್ಲ, ಅದರಲ್ಲಿ ತಪ್ಪುಗಳಿವೆ ಎಂದು ಆರೋಪಿಸುತ್ತಿದ್ದಾರೆ.

ವರದಿ ಅವರಲ್ಲಿದೆಯೇ? ಯಾವ ಆಧಾರದಲ್ಲಿ ಅವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು. ಈಗ ಏಕಾಏಕಿಯಾಗಿ ವರದಿಯನ್ನು ಬಿಡುಗಡೆಗೊಳಿಸುವ ನಿರ್ಧಾರ ಯಾಕೆ ಎಂದು ಆರ್.ಅಶೋಕ್ ಕೇಳುತ್ತಿದ್ದಾರೆ. ಇದೇನು ದಿಡೀರ್ ನಿರ್ಧಾರ ಅಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಇದರ ಬಗ್ಗೆ ಸಮಾಲೋಚನೆ ನಡೆಸುತ್ತಾ ಬಂದಿದ್ದೇವೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು, ಯಾವುದೇ ಚರ್ಚೆ-ಸಂವಾದ ಇಲ್ಲದೆ ದಿಡೀರ್ ನಿರ್ಧಾರ ಕೈಗೊಳ್ಳುವ ಸರ್ವಾಧಿಕಾರಿ ಧೋರಣೆ ನಮ್ಮದ್ದಲ್ಲ. ಸಾರ್ವಜನಿಕ ತೀರ್ಮಾನಗಳನ್ನು ಸಹಮತ ಮೂಡಿಸುವ ಮೂಲಕ ಕೈಗೊಳ್ಳಬೇಕೆಂಬ ಅಭಿಪ್ರಾಯ ನಮ್ಮದಾಗಿದೆ. ಇದರಿಂದಾಗಿ ಸ್ವಲ್ಪ ವಿಳಂಬವಾಗಿದೆ ಅಷ್ಟೆ ಎಂದಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...