2024 ರ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ. ಫಲಿತಾಂಶದ ಟ್ರೆಂಡ್‌ಗಳ ನಡುವೆಯೇ ಮಧ್ಯಪ್ರದೇಶದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಇಂದೋರ್‌ನಲ್ಲಿ 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಮತದಾರರು ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಿಲ್ಲ, ಅಂದರೆ ಮತದಾನದ ಸಂದರ್ಭದಲ್ಲಿ ನೋಟಾ ಬಟನ್ ಒತ್ತಿದ್ದಾರೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಂತಿ ಬಾಮ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಈ ಬಗ್ಗೆ ಇಂದೋರ್ ಜನತೆ ಅಸಮಾಧಾನಗೊಂಡಿದ್ದರು. ಅಕ್ಷಯ್ ಕಾಂತಿ ಬಾಮ್ ನಾಮಪತ್ರ ಹಿಂಪಡೆದ ಬಳಿಕ ಬಿಜೆಪಿ ಸೇರಿದ್ದರು. ಅಕ್ಷಯ್ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಾಗ, ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಮತ್ತು ಮುಖಂಡ ರಮೇಶ್ ಮೆಂಡೋಲಾ ಸಹ ಅವರೊಂದಿಗಿದ್ದರು.
ಮತ ಎಣಿಕೆಯಲ್ಲಿ ಇಂದೋರ್‌ನ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಮುನ್ನಡೆಯಲ್ಲಿದ್ದಾರೆ. ಆದರೆ ನೋಟಾ ಮತಗಳು ಎರಡನೇ ಸ್ಥಾನದಲ್ಲಿವೆ. 1 ಲಕ್ಷ 45 ಸಾವಿರಕ್ಕೂ ಹೆಚ್ಚು ಮಂದಿ ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಿಲ್ಲ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸಂಜಯ್ ಸೋಲಂಕಿ ಮೂರನೇ ಸ್ಥಾನದಲ್ಲಿದ್ದಾರೆ. ಅಖಿಲ ಭಾರತೀಯ ಪರಿವಾರ ಪಕ್ಷದ ಪವನ್ ಕುಮಾರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.