ಬೆಂಗಳೂರು : ರಾಜ್ಯದಲ್ಲಿ ಶೀಘ್ರವೇ ಪ್ರವಾಸೋದ್ಯಮ ನೀತಿ ಜಾರಿಗೊಳಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಇಂದು ಹಮ್ಮಿಕೊಂಡಿದ್ದ “ದಕ್ಷಿಣ ಭಾರತ ಉತ್ಸವ-2024” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಹಾಗೂ ಪ್ರವಾಸೋದ್ಯಮದಲ್ಲಿ ದಕ್ಷಿಣ ಭಾರತದ ರಾಜ್ಯಗಳು ವಿಭಿನ್ನವಾಗಿದ್ದು, ಅದರಲ್ಲೂ ಕರ್ನಾಟಕ ರಾಜ್ಯ ಸಂಸ್ಕೃತಿಯ ಸಂಗಮವಾಗಿದೆ. ದಕ್ಷಿಣ ಭಾರತದ ಏಳೂ ರಾಜ್ಯಗಳಲ್ಲಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಇವುಗಳನ್ನ ಒಂದೇ ವೇದಿಕೆಯ ಅಡಿಯಲ್ಲಿ ತರುವುದು ಹಾಗೂ ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಲು ಅನುವು ಮಾಡಿಕೊಡುವುದು ಈ ಉತ್ಸವದ ಉದ್ದೇಶವಾಗಿದೆ. ಇಂದು ಏಳು ರಾಜ್ಯಗಳ ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿಗಳು, ದೇಶ – ವಿದೇಶಗಳ ಗಣ್ಯರು, ಬಂಡವಾಳ ಹೂಡಿಕೆದಾರರು ಭಾಗವಹಿಸಿರುವುದು ಈ ಕಾರ್ಯಕ್ರಮಕ್ಕೆ ಹೆಗ್ಗಳಿಕೆ ತಂದಿದೆ. ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯಡಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಈ ಕಾರ್ಯಕ್ರಮ ಇದಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಮೂಲ ಧ್ಯೇಯವಾಗಿದ್ದು, ಇದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದೆ.
ನಮ್ಮ ಚಿತ್ತ ಗ್ರೇಟರ್ ಬೆಂಗಳೂರಿನತ್ತ
ಬೆಂಗಳೂರಿನಲ್ಲಿ ವಸತಿ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಹೈಟೆಕ್ ಸೌಲಭ್ಯ ಒಳಗೊಂಡ ಟೌನ್ಶಿಪ್ ನಿರ್ಮಿಸಲು ನಮ್ಮ ಸರ್ಕಾರ ಯೋಜನೆ ರೂಪಿಸಿದ್ದು, ಈ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ಅತ್ಯುತ್ತಮ ನಗರವಾಗಿಸುವುದು ನಮ್ಮ ಕನಸು ಎಂದು ಡಿಕೆಶಿ ಹೇಳಿದ್ದಾರೆ.