ಬೆಂಗಳೂರು : ಅಂಗಾಂಗದಾನ ಮಾಡಿರುವ ಕುಟುಂಬದವರಿಗೆ ‘ಪ್ರಶಂಸಾ ಪತ್ರ’ ನೀಡಿ ಗೌರವಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಂಗಾಂಗದಾನ ಮಾಡಿರುವ ಕುಟುಂಬದ ಸದಸ್ಯರಿಗೆ ಪ್ರತಿ ವರ್ಷ ಸಾರ್ವಜನಿಕ ಸಮಾರಂಭಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸುವಂತೆ ಸರ್ಕಾರ ಆದೇಶಿಸಿದೆ.
ಸದರಿ ಆದೇಶದನ್ವಯ ಅಂಗಾಂಗದಾನ ಮಾಡಿದ 10 ದಿನಗಳ ಒಳಗೆ ಪ್ರಾಥಮಿಕವಾಗಿ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸುವ ಬಗ್ಗೆ, ಕ್ರಮವಹಿಸುವುದು. ತದನಂತರ ಸಾರ್ವಜನಿಕ ಸಮಾರಂಭಗಳಾದ 15ನೇ ಆಗಸ್ಟ್ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ (ಅಂದರೆ ವರ್ಷದ ಜನವರಿ 26ನೇ ರಿಂದ 14 ನೇ ಆಗಸ್ಟ್ ವರೆಗೆ ಅಂಗಾಂಗಗಳನ್ನು ದಾನ ಮಾಡುವವರಿಗೆ) ಮತ್ತು 26ನೇ ಗಣರಾಜೋತ್ಸವದ ಸಮಾರಂಭದಲ್ಲಿ (ಅಂದರೆ, ಹಿಂದಿನ ವರ್ಷದ ಆಗಸ್ಟ್ 15 ರಿಂದ ಸಂಬಂಧಿತ ವರ್ಷ ಜನವರಿ 25ನೇ ದಿನಾಂಕದವರೆಗೆ ಅಂಗಾಂಗಗಳನ್ನು ದಾನ ಮಾಡುವವರಿಗೆ) ಜಿಲ್ಲಾಡಳಿತದ ವತಿಯಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸುವ ಬಗೆ, ಕ್ರಮವಹಿಸತಕ್ಕದೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.
2023ನೇ ಸಾಲಿನಿಂದ ಜುಲೈ 2024 ರವರೆಗೆ ಅಂಗಾಂಗದಾನ ಮಾಡಿರುವ ಕುಟುಂಬದವರಿಗೆ 15ನೇ ಆಗಸ್ಟ್ 2024 ಸ್ಥಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸುವ ಬಗ್ಗೆ ಸಹ ಕ್ರಮವಹಿಸತಕ್ಕದ್ದು ಎಂದು ಸರ್ಕಾರ ಆದೇಶಿಸಿದೆ.