ಶಿವಮೊಗ್ಗ : ಬಡವರ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ, ನೀತಿಯುತ ಯೋಜನೆಗಳ ಮೂಲಕ ಭದ್ರತೆ ಒದಗಿಸುವುದು ಸರ್ಕಾರದ ಬದ್ದತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.
ನೀತಿಯುತ ಯೋಜನೆಗಳ ಮೂಲಕ ಬಡತನ ನರ್ಮೂಲನೆ ಮಾಡಿ, ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಹೋರಾಟವಾಗಿದೆ ಎಂದು ಹೇಳಿದರು. ಜಾತಿಯ ಆಧಾರದಲ್ಲಿ ಅಲ್ಲ. ಬದಲಾಗಿ ನೀತಿಯ ಆಧಾರದಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಚುನಾವಣಾ ಪೂರ್ವ ಸಮಿತಿಯನ್ನು ರಚಿಸಿ, ಗ್ಯಾರಂಟಿ ಕಾರ್ಡುಗಳನ್ನು ಮನೆ ಮನೆಗಳಿಗೆ ತಲುಪಿಸಿದಂತೆ ಸರ್ಕಾರ ರಚನೆಯಾದ ತಕ್ಷಣ ಯೋಜನೆಗಳನ್ನು ಜಾರಿ ಮಾಡಿ ನಡೆದಂತೆ ನುಡಿದಿದ್ದೇವೆ ಎಂದರು.
ಶಿವಮೊಗ್ಗ ಜಿಲ್ಲೆ ಸಮಾಜವಾದಿ ಹೋರಾಟದ ನಾಡು. ಶಿವಪ್ಪನಾಯಕ ಆಳಿದ ನೆಲೆ. ಕುವೆಂಪು ಜನ್ಮದ ಬೀಡು. ಗೋಪಾಲಗೌಡರು, ಕಾಗೋಡು, ಬಂಗಾರಪ್ಪನವರಂತಹ ಹೋರಾಟಗಾರರ ನಾಡು. ಅತಿ ಹೆಚ್ಚು ಮುಖ್ಯಮಂತ್ರಿ ನೀಡಿದ ಜಿಲ್ಲೆ ಇದಾಗಿದ್ದು, ದೊಡ್ಡ ಇತಿಹಾಸ ಹೊಂದಿದ ಮಲೆನಾಡು. ಪ್ರಜ್ಞಾವಂತರ ನಾಡು. ತಾಯಂದಿರು, ಯುವಕರು, ರೈತರು ಚಿಂತೆ ಮಾಡಬೇಡಿ. ನಮ್ಮ ಬಲಿಷ್ಟ ಸರ್ಕಾರ ನಿಮ್ಮ ಜೊತೆಗೆ ಇದೆ. ಏನೇ ಟೀಕೆ ಟಿಪ್ಪಣಿ ಇದ್ದರೂ ಮುಂದೆಯೂ ಗ್ಯಾರಂಟಿ ಮುಂದುವರೆಯುವುದು ಎಂದರು.
ಶಿಕ್ಷಣದಲ್ಲಿ ಗುಣಮಟ್ಟ ತರಲು, ರೈತರು, ಕಾರ್ಮಿಕರು, ಶಿಕ್ಷಕರು ಹಾಗೂ ಎಲ್ಲ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರದ ಹಂತದಲ್ಲಿ ಸಮಿತಿ ರಚಿಸಿ ಕೋಟಿಗೂ ಹೆಚ್ಚು ಬಂಡವಾಳ ಹಾಕಿ ಕೆಪಿಎಸ್, ಸಿಎಸ್ ಆರ್ ಮಾದರಿ ಶಾಲೆಗಳನ್ನು ತೆರೆಯುವ ಯೋಜನೆ ಮೂಲಕ ದೊಡ್ಡ ನಗರದಲ್ಲಿ ದೊರೆಯುವಂತಹ ಶಿಕ್ಷಣ ಹಳ್ಳಿಮಕ್ಕಳಿಗೂ ಸಿಗುವಂತಹ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.