ಬೆಂಗಳೂರು : ರಾಜ್ಯದ ‘ದ್ವಿತೀಯ PUC’ ವಿದ್ಯಾರ್ಥಿಗಳೇ ಗಮನಿಸಿ : ಅಂಕಪಟ್ಟಿಗಳಲ್ಲಿ ಏನಾದರೂ ತಪ್ಪುಗಳಾಗಿದ್ದರೆ ನೀವು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಪರೀಕ್ಷಾಂಗ ಇಲಾಖೆ ಸುತ್ತೋಲೆ ಪ್ರಕಟಿಸಿದೆ.
ಪ್ರಸ್ತುತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಿಂದ ಪ್ರಸ್ತಾವನೆಗಳು ಪಿ.ಯು. ಅಂಕಪಟ್ಟಿ ಶಾಖೆಗೆ ಮೂಲ ಅಂಕಪಟ್ಟಿಯೊಂದಿಗೆ ಸಲ್ಲಿಸಲಾಗುತ್ತಿದ್ದು, ಸದರಿ ಅಂಕಪಟ್ಟಿಯಲ್ಲಿ ತಿದ್ದುಪಡಿಗಳಿಗೆ ಯಾವುದೇ ಶುಲ್ಕ ನಿಗದಿಯಾಗಿರುವುದಿಲ್ಲ. ಈ ಮೇಲಿನ ತಿದ್ದುಪಡಿಗಳನ್ನು ಮಾಡುವ ಸಂದರ್ಭಗಳಲ್ಲಿ ಅಭ್ಯರ್ಥಿಯು ಸಲ್ಲಿಸಿರುವಂತಹ ಮೂಲ ಅಂಕಪಟ್ಟಿಯಲ್ಲಿಯೇ ಬೆರಳಚ್ಚು ಯಂತ್ರದ ಮೂಲಕ ತಿದ್ದುಪಡಿ ಮಾಡಿ ಶಾಖೆಯ ಹಿರಿಯ ಸಹಾಯಕ ನಿರ್ದೇಶಕರಿಂದ ದೃಢಿಕರಿಸಲಾಗುತ್ತಿದೆ.
ಆದರೆ ಕೆಲವು ಅಭ್ಯರ್ಥಿಗಳು ಮೂಲ ಅಂಕಪಟ್ಟಿಗಳಲ್ಲಿ ತಿದ್ದುಪಡಿಯಾಗಿರುವುದನ್ನು ಕೆಲವು ಸಂಸ್ಥೆ/ಇಲಾಖೆಗಳಲ್ಲಿ ಒಪ್ಪದ ಕಾರಣ ಮೂಲ ಅಂಕಪಟ್ಟಿಯನ್ನು ಹಿಂದಿರುಗಿಸಿ ದ್ವಿಪ್ರತಿಗಾಗಿ ಪ್ರಸ್ತಾವನೆಗಳನ್ನು ಮಂಡಲಿಗೆ ಸಲ್ಲಿಸಲಾಗುತ್ತಿದೆ. ಅಲ್ಲದೆ, ಭಾವಚಿತ್ರ ತಿದ್ದುಪಡಿಗಳಿಗೆ CORRECTED COPY ಎಂದು ಮುದ್ರಿಸಿ ನೀಡಲಾಗುತ್ತಿದ್ದು, ಇದೇ ಮಾದರಿಯಲ್ಲಿ ಪ್ರಸಕ್ತ ಮತ್ತು ಹಿಂದಿನ ಎಲ್ಲಾ ವರ್ಷಗಳ ಅಂಕಪಟ್ಟಿ, ತಿದ್ದುಪಡಿಗಳಿಗೆ ಶುಲ್ಕವನ್ನು ನಿಗದಿಪಡಿಸಿ, ಅಂಕಪಟ್ಟಿಗಳನ್ನು ನೀಡುವ ಬಗ್ಗೆ ಮಂಡಲಿಯಿಂದ ಆದೇಶವನ್ನು ಹೊರಡಿಸಲು ಕ್ರಮ ಕೈಗೊಳ್ಳಲು ಕೋರಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ಮಾಧ್ಯಮ ತಿದ್ದುಪಡಿ ಮಾಡುವ ಸಂಬಂಧ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸಕ್ತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿ ಸಂಬಂಧ ಉಲ್ಲೇಖ-1ರ ಸರ್ಕಾರಿ ಆದೇಶದಲ್ಲಿ ನಿಗದಿಯಾಗಿರುವಂತೆ ಹಾಗೂ ಉಲ್ಲೇಖ-3 ರಲ್ಲಿ ಮಂಡಲಿಯ ಇ-ಕಛೇರಿಯ ಕಡತದಲ್ಲಿ ಅನುಮೋದಿಸಿರುವಂತೆ ನಿಗದಿತ ಶುಲ್ಕ ರೂ. 1600/- (ರೂಪಾಯಿ ಒಂದು ಸಾವಿರದ ಆರು ನೂರು ಮಾತ್ರ) https://k2.karnataka.gov.in ಮೂಲಕ ಲಾಗಿನ್ 0202-01-101-1-06 2 ಸಂಬಂಧಿಸಿದ ಬ್ಯಾಂಕ್ನಲ್ಲಿ ಹಣ ಪಾವತಿಸಿದ ಮೂಲ ಕೆ-2 ಚಲನ್ ಪ್ರತಿ, ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪ್ರತಿ ಮತ್ತು ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಡಲಿಯ ವತಿಯಿಂದ ಪರಿಷ್ಕೃತ ಅಂಕಪಟ್ಟಿಯನ್ನು ನೀಡಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.