ಬೆಂಗಳೂರು : ಸಕಾಲ ಕಾಯಿದೆಯಡಿ ನೀಡುವ ಸೇವೆಗಳಿಗೆ ವಿತರಿಸುವ ಪ್ರಮಾಣ ಪತ್ರಗಳಲ್ಲಿ GSC ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ GSC ಸಂಖ್ಯೆಯಿಲ್ಲದ ಪ್ರಮಾಣ ಪತ್ರಗಳನ್ನು ಅಸಿಂಧು/ಅಮಾನ್ಯವೆಂದು ಪರಿಗಣಿಸುವ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದಲ್ಲಿ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ, 2011 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಕಾಲ ಮಿಷನ್ ಅನ್ನು ರಚಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು (ತಿದ್ದುಪಡಿ) ಅಧಿನಿಯಮ 2014 ರಡಿಯಲ್ಲಿನ ಎಲ್ಲಾ ಸಕಾಲ ಅಧಿಸೂಚಿತ ಸೇವೆಗಳನ್ನು ನಾಗರೀಕರಿಗೆ ಕಾಲಮಿತಿಯಲ್ಲಿ ನೀಡುವುದು ಕಡ್ಡಾಯವಾಗಿರುತ್ತದೆ ಹಾಗೂ ಸದರಿ ಅಧಿನಿಯಮದ ಕಲಂ 6(1) ರನ್ವಯ ಎಲ್ಲಾ ಸಕಾಲ ಅಧಿಸೂಚಿತ ಸೇವೆಗಳಿಗೆ 15 ಅಂಕಿಯ ಸಕಾಲ ಸ್ವೀಕೃತಿ ಸಂಖ್ಯೆಯನ್ನು ಸ್ವೀಕೃತಿಯಾಗಿ (ಜಿ.ಎಸ್.ಸಿ. ಸಂಖ್ಯೆ) ನಮೂದಿಸುವುದನ್ನು ಕಡ್ಡಾಯಗೊಳಿಸಿದೆ.
ಮೇಲೆ (2) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011, ಹಾಗೂ (ತಿದ್ದುಪಡಿ) ಅಧಿನಿಯಮ 2014ರಡಿ ಸೇರ್ಪಡೆಯಾಗಿರುವ ಎಲ್ಲಾ ಇಲಾಖೆ / ಸಂಸ್ಥೆಗಳ ಸೇವೆಗಳ ಅರ್ಜಿಗಳಿಗೆ ಸಂಬಂಧಪಟ್ಟಂತೆ ವಿತರಿಸುವ ಪ್ರಮಾಣ ಪತ್ರ / ಪರವಾನಗಿ /ಮಂಜೂರಾತಿ ಪತ್ರಗಳಿಗೆ ಕಡ್ಡಾಯವಾಗಿ GSC ಸಂಖ್ಯೆಯನ್ನು ಪ್ರದರ್ಶಿಸತಕ್ಕದ್ದು ಹಾಗೂ GSC ಸಂಖ್ಯೆಯನ್ನು ನೀಡದೆ ವಿತರಿಸಲಾದ ಪ್ರಮಾಣ ಪತ್ರಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಹಾಗೂ ಈ ಕುರಿತು ಸಂಬಂಧಪಟ್ಟ ಅಧಿಕಾರಿಯ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಆದರೆ ಆಚರಣೆಯಲ್ಲಿ ಸಕಾಲ ಅಧಿಸೂಚಿತ ಸೇವೆಗಳಿಗೆ ಕೆಲವು ಪ್ರಕರಣಗಳಲ್ಲಿ ಸಕಾಲ ಕಾಯ್ದೆಯನ್ನು ಬೈಪಾಸ್ ಮಾಡಿ ಅರ್ಜಿಗಳನ್ನು ಸ್ವೀಕರಿಸುತ್ತಿರುವುದನ್ನು ಗಮನಿಸಲಾಗಿದೆ. ಇದನ್ನು ತಪ್ಪಿಸಲು GSC ಸಂಖ್ಯೆ ಇಲ್ಲದೆ ನೀಡಲಾದ ಸೇವಾ ಅರ್ಜಿಗಳ ಪ್ರಮಾಣ ಪತ್ರಗಳು / ಅನುಮೋದನೆಗಳು ಮತ್ತು ಹಿಂಬರಹಗಳನ್ನು ಅಮಾನ್ಯವೆಂದು ಪರಿಗಣಿಸಬೇಕಾಗಿದೆ. ಇದರಿಂದ ಆಯಾ ಇಲಾಖೆಗಳು ಸಕಾಲ ಅಧಿಸೂಚಿತ ಸೇವೆಗಳನ್ನು ಕಾಯ್ದೆಯಂತೆ ನಿಗದಿ ಪಡಿಸಲಾದ ಸೇವಾ ಪ್ರಕ್ರಿಯೆಯನ್ನು ಹೊರತುಪಡಿಸಿ ಸೇವೆಗಳನ್ನು ವಿತರಣೆ ಮಾಡುವುದು ಅಸಾಧ್ಯವಾಗುತ್ತದೆ. ಇದರಿಂದ ನಕಲಿ ಸೇವಾ ಪ್ರಮಾಣ ಪತ್ರಗಳನ್ನು ನೀಡುವುದನ್ನೂ ಸಹ ತಪ್ಪಿಸಬಹುದಾಗಿದೆ ಮತ್ತು ಇದು ನಾಗರೀಕರಲ್ಲಿ ಸಕಾಲ (ಜಿಎಸ್ಸಿ) ಸಂಖ್ಯೆಯ ಮಹತ್ವದ ಬಗ್ಗೆ ಅರಿವು ಮೂಡಿಸುತ್ತದೆ.