ನವದೆಹಲಿ: 22 ವರ್ಷಗಳ ಶೋಧದ ನಂತರ ದೆಹಲಿ ಪೊಲೀಸರು ನಿಷೇಧಿತ ಸಂಘಟನೆ ಸಿಮಿ ಸದಸ್ಯ ಹನೀಫ್ ಶೇಖ್ ನನ್ನು ಬಂಧಿಸಿದ್ದಾರೆ.
ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಶೇಖ್ ವಿರುದ್ಧ ಪ್ರಕರಣಗಳು ದಾಖಲಾದಾಗಿನಿಂದ ಮತ್ತು 2001 ರಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಿದ್ದರಿಂದ ಪೊಲೀಸರು ಈತನ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದರು.
ಸಂಘಟನೆಯ ‘ಇಸ್ಲಾಮಿಕ್ ಮೂವ್ಮೆಂಟ್’ ನಿಯತಕಾಲಿಕದ ಉರ್ದು ಆವೃತ್ತಿಯ ಸಂಪಾದಕನಾಗಿದ್ದ ಶೇಖ್, ಕಳೆದ 25 ವರ್ಷಗಳಲ್ಲಿ ತನ್ನ ಬೋಧನೆಗಳ ಮೂಲಕ ಹಲವಾರು ಯುವ ಮುಸ್ಲಿಮರನ್ನು ತೀವ್ರಗಾಮಿಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಂತ ನಟೋರಿಯಸ್ ಮತ್ತು ವಾಂಟೆಡ್ ಸಿಮಿ ಉಗ್ರ ಎಂದು ದಿಲ್ಲಿ ಪೊಲೀಸರು ಘೋಷಿಸಿದ್ದ ಹನೀಫ್ ಶೇಖ್, ಮೊಹಮದ್ ಹನೀಫ್ ಮತ್ತು ಹನೀಫ್ ಹುದೈ ಎಂಬ ಅಲಿಯಾಸ್ ಹೆಸರುಗಳನ್ನೂ ಹೊಂದಿದ್ದ. ಈತನನ್ನು ಬಂಧಿಸಲು ದಿಲ್ಲಿ ವಿಶೇಷ ಘಟಕದ ಪೊಲೀಸರು ವಿಭಿನ್ನ ರಾಜ್ಯಗಳಲ್ಲಿ ಆತನ ಕುರಿತು ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದರು. ಹನೀಫ್ ಮತ್ತು ಆತನ ಸಹಚರರ ಸುಳಿವು ಪತ್ತೆಗಾಗಿ ಏಳು ರಾಜ್ಯಗಳಲ್ಲಿ ಬಾತ್ಮೀದಾರರನ್ನು ನಿಯೋಜಿಸಿದ್ದರು.