ಬೆಂಗಳೂರು: ರಾಜ್ಯದಲ್ಲಿ ಎಸ್ ಡಿ ಪಿ ಐ ಹಾಗೂ ಪಿಎಫ್ ಐ ಎರಡೂ ಸಂಘಟನೆಗಳು ಬಿಜೆಪಿ ಬಿ ಟೀಂ. ಈ ಸಂಘಟನೆಗಳಿಗೆ ಬಿಜೆಪಿಯಿಂದಲೇ ಹಣ ನೀಡಲಾಗುತ್ತಿದೆ ಎಂದು ಆರ್ ಎಸ್ ಎಸ್ ಮುಖಂಡರೇ ಹೇಳಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ಎರಡೂ ಸಂಘಟನೆಗಳಿಗೂ ಬಿಜೆಪಿ ಹಣ ಕೊಡುತ್ತಿರುವುದಾಗಿ ಆರ್ ಎಸ್ ಎಸ್ ಮುಖಂಡರೇ ಹೇಳುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರೇ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಗೃಹ ಸಚಿವರನ್ನು ಆ ಊರಿಗೆ ಕಾಲಿಡಲು ಬಿಟ್ಟಿಲ್ಲ. ನಳೀನ್ ಕಟೀಲ್ ಕಾರನ್ನು ಮಾತ್ರ ಕಾರ್ಯಕರ್ತರು ಅಲ್ಲಾಡಿಸಿಲ್ಲ. ಸಿಎಂ ಬೊಮ್ಮಾಯಿ ಖುರ್ಚಿಯೂ ಅಲ್ಲಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿರುದ್ಧವೂ ಕಿಡಿಕಾರಿದ ಖರ್ಗೆ, ಎಲ್ಲರಿಗೂ ಭದ್ರತೆಗಾಗಿ ಸೆಕ್ಯೂರಿಟಿ ನೇಮಕ ಮಾಡಲು ಆಗುತ್ತಾ ಎಂದು ಕೇಳುತ್ತಿದ್ದಾರೆ. ಅವರ ಹೆಸರು ಮಾತ್ರ ತೇಜಸ್ವಿ ಸೂರ್ಯ, ಅವಿವೇಕ ತನದ ಪರಮಾವಧಿ ಅವರು. ಬರಿ ವಾಟ್ಸಪ್ ವಿಶ್ವವಿದ್ಯಾಲಯದಲ್ಲಿ ಓದಿದರೆ ಹೀಗೆ ಆಗೋದು. ಪೊಲೀಸರಿಗೆ ಗೌರವ ಕೊಡುತ್ತಿಲ್ಲ, ನೀವೇ ಕಳ್ಳರನ್ನು ಸಾಕುತ್ತಿದ್ದೀರಿ. ಒಬ್ಬ ಅಧಿಕಾರಿ ಕೂಡ ವರ್ಗಾವಣೆಗೆ ದುಡ್ಡು ಕೊಡಬೇಕು. ಇಂತವರಿಂದ ಇನ್ನೇನು ರಕ್ಷಣೆ ನಿರೀಕ್ಷಿಸಲು ಸಾಧ್ಯ? ಎಂದು ಕಿಡಿಕಾರಿದರು.