ಬೆಂಗಳೂರು: ಆರ್.ಎಸ್.ಎಸ್ ಮೂಲ ಭಾರತೀಯರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ನಾಯಕರ ಹೆಸರಿನ ಮೂಲದ ಬಗ್ಗೆ ಪ್ರಸ್ತಾಪಿಸುವ ಮೂಲಕ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯ ಅವರೇ, ನೀವು ಯಾರ ವಿಶ್ವಾಸಕ್ಕಾಗಿ ಹೇಳಿಕೆ ನೀಡುತ್ತಿದ್ದೀರೋ, ಅವರ ಮೂಲ ನಿಮಗೆ ತಿಳಿದಿಲ್ಲವೇ? ಫಿರೋಜ್ ಗಾಂಧಿ – ಫಿರೋಜ್ ಜೆಹಾಂಗೀರ್ ಗ್ಯಾಂಡಿ, ಪರ್ಷಿಯನ್ ಮೂಲ. ಸೋನಿಯಾ ಗಾಂಧಿ – ಎಡ್ವಿಜ್ ಆಂಟೋನಿಯಾ ಅಲ್ಬಿನಾ ಮೈನೊ, ಇಟಲಿ ಮೂಲ. ರಾಹುಲ್ ಗಾಂಧಿ – ರೌಲ್ ವಿನ್ಸಿ. ಇಂದಿರಾ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆಗಿದ್ದೇಗೆ? ಇಂದಿರಾ ಪ್ರಿಯದರ್ಶಿನಿ ಗ್ಯಾಂಡಿ, ಇಂದಿರಾ ಗಾಂಧಿ ಆಗಿದ್ದೇಗೆ? ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.
ಆಫ್ಘಾನಿಸ್ತಾನದ ಬಾಬುರ್ ಸಮಾಧಿಗೆ, 1959 ರಲ್ಲಿ ನೆಹರೂ, 1968 ರಲ್ಲಿ ಇಂದಿರಾ ಗಾಂಧಿ, 2005 ರಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ! ಭೇಟಿಯ ಬಳಿಕ “ಮೈ ಟ್ರೂ ಹೋಮ್ ಕಮಿಂಗ್” ಎಂದು ಉದ್ಘರಿಸಿದ್ದರು ಇಂದಿರಾ!!! ಸಾವಿರಾರು ಹಿಂದೂಗಳನ್ನು ಹತ್ಯೆಗೈದ ಬಾಬುರ್ ಎಂಬ ಮತಾಂಧನ ಮೂಲ ಹಾಗೂ ಇವರ ಮೂಲ ಎರಡೂ ಒಂದೇ ಆಗಿದೆಯೇ? ಎಂದು ಪ್ರಶ್ನಿಸಿದೆ.
ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗಿರುವ ಕಾಂಗ್ರೆಸ್ ಪಕ್ಷ, ಇಂದಿರಾ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳ ಪಕ್ಷ. ಅಂದಹಾಗೆ ಸಿದ್ದರಾಮಯ್ಯನವರೇ, ನೀವು ಕೂಡ ಜನತಾದಳ ಪಕ್ಷದಿಂದ, ಅಧಿಕಾರದ ಮೋಹದಿಂದ ನಕಲಿ ಗಾಂಧಿ ಪಕ್ಷಕ್ಕೆ ಬಂದವರಲ್ಲವೇ? ಎಂದು ವ್ಯಂಗ್ಯವಾಡಿದೆ.