ಶಿವಮೊಗ್ಗ: ರಾಜ್ಯದ ನಾಲ್ಕು ಹಾಗೂ ಉತ್ತರ ಪ್ರದೇಶದ ಎರಡು ಆರ್.ಎಸ್.ಎಸ್.ಕಾರ್ಯಾಲಯದ ಮೇಲೆ ದಾಳಿ ನಡೆಸಿ, ಕಾರ್ಯಾಲಯ ಧ್ವಂಸಗೊಳಿಸುವುದಾಗಿ ಬೆದರಿಕೆ ಸಂದೇಶ ರವಾನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಆ.ಎಸ್.ಎಸ್ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಸೆಂಥಿಲ್ ಎಂದು ಗುರುತಿಸಲಾಗಿದೆ. ಆತನನ್ನು ಈಗಾಗಲೇ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಬೆದರಿಕೆ ಪ್ರಕರಣ ಹಿನ್ನೆಲೆಯಲ್ಲಿ ರಾಜ್ಯದ ಆರ್.ಎಸ್.ಎಸ್ ಕಾರ್ಯಾಲಯಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.
ಇನ್ನು ಬೆಂಗಳೂರಿನಲ್ಲಿ ಉಗ್ರನ ಬಂಧನ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ. ಶಂಕಿತ ಉಗ್ರನಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳು, ಸಂಸ್ಥೆಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಜಮ್ಮು-ಕಾಶ್ಮೀರ ಪೊಲೀಸರು ಕರ್ನಾಟಕ ಪೊಲೀಸರೊಂದಿಗೆ ಸೇರಿ ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿಸಿದರು.