ಬೆಂಗಳೂರು: ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ ಮುಂದುವರೆದಿದೆ. ಇದರ ಹಿಂದೆ ಆರ್.ಎಸ್.ಎಸ್ ಕುತಂತ್ರ ಅಡಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿದ್ದರಲ್ಲ ಅವರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ? ಆರ್.ಎಸ್.ಎಸ್ ನವರು ಮಾಡಿಸಿದ್ದಾರೆ. ಈ ಪೆದ್ದ ಈಶ್ವರಪ್ಪ ಮಾಡಿದ್ದಾರೆ. ಬಳಿಕ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಆರ್.ಎಸ್.ಎಸ್ ನವರಿಗೆ ತ್ರಿವರ್ಣ ಧ್ವಜವೆಂದರೆ ಗೌರವ ಇಲ್ಲ, ರಾಷ್ಟ್ರಧ್ವಜ ಸ್ವಾತಂತ್ರ್ಯ ಹೋರಾಟಗಾರರಿಗೆ ಶಕ್ತಿ ತುಂಬಿದೆ. ಇದು 130 ಕೋಟಿ ಜನರ ಭಾವನೆಗಳ ವಿಚಾರ. ದೇಶದ ಸ್ವಾಭಿಮಾನದ ವಿಷಯ. ಆದರೆ ಈಶ್ವರಪ್ಪ ಇದಕ್ಕೆ ಅಪಮಾನ ಮಾಡಿದ್ದಾರೆ. ಮೊದಲು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ವಾಗ್ದಾಳಿ ನಡೆಸಿದರು.