ಮುಂಬೈ: ಹೊಸದಾಗಿ ಮುದ್ರಿಸಲಾಗಿದ್ದ ನೋಟುಗಳು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್ ನೋಟು ಮುದ್ರಣಾಲಯದಿಂದ 5 ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳು ನಾಪತ್ತೆಯಾಗಿದ್ದು ನಾಸಿಕ್ ಪೊಲೀಸರಿಗೆ ಈ ಕುರಿತಾಗಿ ದೂರು ನೀಡಲಾಗಿದೆ.
ದೇಶದಲ್ಲಿ ಅತ್ಯುತ್ತಮ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ನೋಟು ಮುದ್ರಣಾಲಯದಿಂದ ಈ ರೀತಿ ಐದು ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ವರ್ಷಕ್ಕೆ ಎರಡರಿಂದ ಎರಡೂವರೆ ಸಾವಿರ ಮಿಲಿಯನ್ ರೂಪಾಯಿ ಮೌಲ್ಯದ ನೋಟುಗಳನ್ನು ನಾಸಿಕ್ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತದೆ. 24 ಗಂಟೆಗಳ ಕಾಲ ಅತ್ಯಾಧುನಿಕ ಮತ್ತು ಬಿಗಿಯಾದ ಭದ್ರತಾ ವ್ಯವಸ್ಥೆಗಳು ಇಲ್ಲಿವೆ. ಇಂತಹ ಸ್ಥಳದಿಂದ, ನೋಟು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಡಿಮಾನಿಟೈಸೇಷನ್ ಸಂದರ್ಭದಲ್ಲಿ ನೋಟು ಮುದ್ರಣಾಲಯಗಳಲ್ಲಿ ಹಗಲು-ರಾತ್ರಿ ನೋಟುಗಳನ್ನು ಮುದ್ರಿಸಿ ಪೂರೈಕೆ ಮಾಡಲಾಗಿತ್ತು. ಅಂತಹ ಸಮಯದಲ್ಲಿ ಏನೂ ಆಗಿರಲಿಲ್ಲ. ಈಗ ಬಿಗಿ ಭದ್ರತೆಯ ನಡುವೆ ನೋಟುಗಳು ಕಾಣೆಯಾಗಿರುವ ಬಗ್ಗೆ ಮುದ್ರಣಾಲಯ ಅಧಿಕಾರಿಗಳು ನಾಸಿಕ್ ಉಪನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.