ಕಲಬುರಗಿ : ಗ್ಯಾರಂಟಿ ಯೋಜನೆಗಳಿಗೆ 38,000 ಕೋಟಿ ರೂ. ವೆಚ್ಚ ತಗುಲಿದರು ಕೂಡಾ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ. ಏಕೆಂದರೆ, ನಮಗೆ ಜನಪರ ಕಾಳಜಿ ಇದೆ, ಗ್ರಾಮೀಣ ಅಭಿವೃದ್ದಿಯ ತುಡಿತವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಕಮರವಾಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಿಂದ ಬಲರಾಮ ಚೌಕ್ ವರೆಗೆ PMGSY ಯೋಜನೆಯಡಿಯಲ್ಲಿ ₹ 446 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು ಹಾಗೂ PWD ವತಿಯಿಂದ ವಾಡಿ – ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರ ತಾಂಡವರೆಗೆ ₹ 200 ಲಕ್ಷದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ದುಡ್ಡುಕೊಟ್ಟರೆ ಚುನಾವಣೆ ನಡೆಯುವುದಿಲ್ಲ. ಅಭಿವೃದ್ದಿಯೇ ಇಲ್ಲಿ ಪ್ರಮುಖವಾಗುತ್ತದೆ ಎಂದು ನೀವೆಲ್ಲ ಮೂರನೆಯ ಬಾರಿ ತೋರಿಸಿಕೊಟ್ಟಿದ್ದೀರಿ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿ ಸಚಿವನೂ ಆಗಿದ್ದೇನೆ. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸಲು ಬದ್ದವಾಗಿದ್ದೇನೆ ಎಂದರು.
ಕಮರವಾಡಿ ಗ್ರಾಮದ ಸೋಮಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ರೂಪುರೇಷೆ ಮಾಡಲಾಗಿದ್ದು, ಅಭಿವೃದ್ದಿಯೇ ನನ್ನ ಮೂಲ ಮಂತ್ರವಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳನ್ನು ನಾನು ಬಯಲಿಗೆಳೆದಿದ್ದಕ್ಕೆ ಚಿತ್ತಾಪುರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ₹300 ಕೋಟಿ ಅನುದಾನ ವಾಪಸ್ ಪಡೆಯಲಾಯಿತು. ಹಾಗಾಗಿ, ಅಭಿವೃದ್ದಿ ಕಾರ್ಯದಲ್ಲಿ ಹಿನ್ನೆಡೆಯಾಯಿತು. ಆದರೆ, ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ನಿಮಗೆ ಕುಡಿಯುವ ನೀರು, ರಸ್ತೆ, ಶಾಲೆ, ಸಮುದಾಯ ಭವನ ಮುಂತಾದ ಅಭಿವೃದ್ದಿ ಕೆಲಸಗಳನ್ನು ಮುನ್ನಡೆಸುವ ಮೂಲಕ ನಿಮ್ಮೆಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಯುವನಿಧಿ ಕಾರ್ಯಕ್ರಮ ಜಾರಿಗೊಳ್ಳಲಿದೆ.ಈ ಎಲ್ಲ ಯೋಜನೆಗಳಿಗೆ ₹38,000 ಕೋಟಿ ವೆಚ್ಚ ತಗುಲಿದರು ಕೂಡಾ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ. ಏಕೆಂದರೆ, ನಮಗೆ ಜನಪರ ಕಾಳಜಿ ಇದೆ, ಗ್ರಾಮೀಣ ಅಭಿವೃದ್ದಿಯ ತುಡಿತವಿದೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ನೈರ್ಮಲ್ಯ ಯೋಜನೆಯಡಿಯಲ್ಲಿ ₹25 ಲಕ್ಷ ಖರ್ಚು ಮಾಡಿ ಪ್ರತಿ ಗ್ರಾಮಪಂಚಾಯತಿಯ ಕೇಂದ್ರ ಸ್ಥಾನದಲ್ಲಿ ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಲಿದ್ದು, ಈ ಶೌಚಾಲಯ ಸ್ವಚ್ಛತೆ ಕಾರ್ಯ ಮಾತ್ರ ನಿಮ್ಮದಾಗಿದೆ. ಮುಂದಿನ ಒಂದುವರೆ ವರ್ಷದೊಳಗಡೆ ಈ ಯೋಜನೆ ಪೂರ್ಣಗೊಳಿಸುವ ಯೋಚನೆ ಇದೆ ಎಂದು ಹೇಳಿದ್ದಾರೆ.
ಈ ಭಾಗದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಹೈಟೆಕ್ ಲೈಬ್ರರಿ ಸ್ಥಾಪನೆ ಮಾಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಪುಸ್ತಕಗಳು ಅಲ್ಲಿ ಲಭ್ಯವಾಗಲಿವೆ. ಬಸವಣ್ಣನವರ ಅರಿವೆ ಗುರು ಎನ್ನುವ ತತ್ವದಡಿಯಲ್ಲಿ ಅರಿವು ಮೂಡಿಸುವ ಯೋಜನೆ ಇದಾಗಿದೆ. ಅಂತಹ ಗ್ರಂಥಾಲಯಗಳನ್ನು ಅರಿವು ಕೇಂದ್ರ ಎಂದು ಕರೆಯಲಾಗುತ್ತಿದೆ.
ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿಗರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಬಿಜೆಪಿಗರ ಈ ರೋಗಕ್ಕೆ ಔಷಧವಿಲ್ಲ. 40% ಕಮಿಷನ್ ಪಡೆದು ಜನರ ಹಣವನ್ನು ಲೂಟಿ ಮಾಡಿ ಅಧಿಕಾರ ಕಳೆದುಕೊಂಡವರು ಅವರು ಬಿಜೆಪಿಗರು ಎಷ್ಟೇ ಟೀಕೆ ಮಾಡಿದರೂ ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ವಿರಾಮ ಇಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.