ಬೆಂಗಳೂರು : ಹೊಸದಾಗಿ ಶಾಲೆಗಳನ್ನು ಆರಂಭಿಸಲು ನೋಂದಣಿ ಅವಧಿ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2024-25ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ನೊಂದಣಿ (Registration) ಹಾಗೂ ಶಾಲಾ ಡ್ರೆಸ್ ಕೋಡ್ ಪಡೆಯುವ ಕುರಿತು ಅವಧಿಯನ್ನು ವಿಸ್ತರಿಸಿ ಅವಕಾಶ ಕಲ್ಪಿಸಲಾಗಿದೆ.
ಮುಂದುವರೆದು, 2024-25ನೇ ಸಾಲಿನ ಹೊಸ ಶಾಲಾ ನೊಂದಣಿಗೆ ಅವಧಿಯನ್ನು ವಿಸ್ತರಿಸುವಂತೆ ಸಲ್ಲಿಕೆಯಾದ ಮನವಿಗಳು ಹಾಗೂ ಉಲ್ಲೇಖಿತ (15)ರಲ್ಲಿ ಸರ್ಕಾರದಿಂದ ಏಕಕಡತದಲ್ಲಿ ಅನುಮೋದನೆಯಂತೆ 2024-25ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ ಪ್ರೌಢ ಶಾಲೆ ನೊಂದಣಿಗೆ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ದಿನಾಂಕ:-04-09-2024 ರಿಂದ ದಿನಾಂಕ:21-09-2024ರವರೆಗೆ 15 ದಿನಗಳ ಕಾಲ ಅಂತಿಮವಾಗಿ ಅವಕಾಶ ನೀಡಲಾಗಿದೆ.
ಈಗಾಗಲೇ 2024-25ನೇ ಸಾಲಿಗೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಆಡಳಿತ ಮಂಡಳಿಗಳಿಗೆ ಹಾಗೂ ಹೊಸದಾಗಿ ಅರ್ಜಿಗಳನ್ನು ಸಲ್ಲಿಸುವ ಆಡಳಿತ ಮಂಡಳಿಗಳಿಗೂ ಈ ಅವಕಾಶ ಅನ್ವಯವಾಗುತ್ತದೆ.
ಉಚಿತ ಮತ್ತು ಕಡ್ಡಾಯ ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆ-2009ರ ಷಡ್ಯೂಲ್ ನಂತೆ ಶಾಲೆಯು ಪ್ರತಿ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗಳಿಗೆ ಕನಿಷ್ಟ 800 ಗಂಟೆಗಳ ಬೋಧನಾ ಅವಧಿ ಹಾಗೂ 6 ರಿಂದ 8ನೇ ತರಗತಿಗಳಿಗೆ ಕನಿಷ್ಟ 1000 ಗಂಟೆಗಳ ಬೋಧನಾ ಅವಧಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಲು ಆಡಳಿತ ಮಂಡಳಿಗಳಿಗೆ ಅಂತಿಮ ಅವಕಾಶ ನೀಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ಪುನ: ವಿಸ್ತರಿಸಲಾಗುವುದಿಲ್ಲ ಎಂಬ ಅಂಶವನ್ನುಸ್ಪಷ್ಟವಾಗಿ ತಿಳಿಸಲಾಗಿದೆ.
ಪ್ರಸ್ತುತ 2024-25ನೇ ಸಾಲಿಗೆ ನೊಂದಣಿ ಕೋರಿ ಅರ್ಜಿ ಸಲ್ಲಿಸಲು ನೀಡಿದ ಕಾಲಾವಕಾಶದಲ್ಲಿ ಯಾವುದೇ ಶಾಲಾ ಆಡಳಿತ ಮಂಡಳಿಯ ಅರ್ಜಿಯು ತಿರಸ್ಕೃತಗೊಂಡಲ್ಲಿ ಅಥವಾ ದಾಖಲೆಗಳ ಕೊರತೆಯಿಂದ ಅರ್ಜಿ ಸಲ್ಲಿಸಲು ಅವಕಾಶವಾಗದಿದ್ದಲ್ಲಿ ಅಂತಹ ಆಡಳಿತ ಮಂಡಳಿಗಳು ದಿನಾಂಕ:- 25-09-2024 ರಿಂದ 2025-26ನೇ ಸಾಲಿಗೆ ಹೊಸಶಾಲಾ ನೋಂದಣಿಗೆ ಅರ್ಜಿ ಆಹ್ವಾನಿಸಿ ಬಿಡುಗಡೆ ಮಾಡುವ ಆನ್ ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.