ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿ ಅಮೃತ್ ಪೌಲ್ ಗೆ ಮಂಪರು ಪರೀಕ್ಷೆ ನಡೆಸಲಿ ಆಗ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಹೊರಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಮೃತ್ ಪೌಲ್ ಅವರನ್ನು 164ರಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ ಹೇಳಿಕೆ ಕೊಡಿಸಲಿ. ಪಿ ಎಸ್ ಐ ಹುದ್ದೆಗಾಗಿ ಲಂಚ ಪಡೆದಿರುವ ಶಾಸಕ ದಡೇಸಗೂರು ಅವರ ವಿಚಾರಣೆ ಇನ್ನೂ ನಡೆದಿಲ್ಲ, ಅವರ ಆಡಿಯೋ ಕೂಡ ಹೊರಗೆ ಬಂದಿದೆ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಈ ಬಗ್ಗೆ ಮೊದಲು ತನಿಖೆ ನಡೆಸಲಿ ಎಂದರು.
ಬಿಜೆಪಿ ಶಾಸಕ ಯತ್ನಾಳ್, ಮಾಜಿ ಸಿಎಂ ಪುತ್ರರೊಬ್ಬರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ನನಗೆ ಗೊತ್ತಿಲ್ಲ ಯಾವ ಮಾಜಿ ಸಿಎಂ ಪುತ್ರ ಎಂಬುದು. ದೇವೇಗೌಡರ ಮಗನಾ? ಯಡಿಯೂರಪ್ಪ ಮಗನಾ? ಸಿದ್ದರಾಮಯ್ಯ ಮಗನಾ? ಈ ಬಗ್ಗೆ ಮೊದಲು ತನಿಖೆಯಾಗಬೇಕು ಎಂದು ಆಗ್ರಹಿಸಿದರು.