ಕಲಬುರ್ಗಿ: 545 ಪಿ ಎಸ್ ಐ ಹುದ್ದೆ ನೇಮಕಾತಿ ಹಗರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಪ್ರಮುಖ ಆರೋಪಿ ಕಿಂಗ್ ಪಿನ್ ರುದ್ರಗೌಡ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರುದ್ರಗೌಡ, ಜೈಲಿಂದ ಹೊರಬರುತ್ತಿದ್ದಂತೆ ಕೋರ್ಟ್ ಷರತ್ತುಗಳನ್ನು ಉಲ್ಲಂಘಿಸಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ರುದ್ರಗೌಡನ ಕಲಬುರ್ಗಿ ಅಕ್ಕಮಾಹಾದೇವಿ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಿನೆಲೆಯಲ್ಲಿ ರುದ್ರಗೌಡ ಪಾಟೀಲ್ ಕುಟುಂಬದವರಿಗೆ ಸಿಐಡಿ ನೊಟೀಸ್ ನೀಡಿದೆ. ನಿಗದಿತ ವಿಳಾಸದ ಮನೆಯಲ್ಲಿರಬೇಕು, ಸಾಕ್ಷ್ಯ ನಾಶ ಮಾಡಬಾರದು ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಆದರೆ ತನಿಖಾಧಿಕಾರಿಗೆ ನೀಡಿದ್ದ ಮನೆಯ ವಿಳಾಸಕ್ಕೆ ತೆರಳಿ ಪರಿಶೀಲಿಸಿದಾಗ ರುದ್ರಗೌಡ ಮನೆ ಲಾಕ್ ಆಗಿದ್ದು, ನೀಡಿದ್ದ ಮೊಬೈಲ್ ನಂಬರ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ರುದ್ರಗೌಡ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.