ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಇದೀಗ ಸಹೋದರರಿಬ್ಬರೂ ಭಾಗಿಯಾಗಿದ್ದು, ಅಕ್ರಮವೆಸಗಿರುವ ಬಗ್ಗೆ ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ.
ಪಿ ಎಸ್ ಐ ನೇಮಕಾತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪರೀಕ್ಷೆಯಲ್ಲಿ ಅಣ್ಣ-ತಮ್ಮಂದಿರಾದ ನಾರಾಯಣ ಸಿ.ಎಂ. ಹಾಗೂ ನಾಗರಾಜ ಸಿ.ಎಂ. ಎಂಬ ಇಬ್ಬರೂ ಭಾಗಿಯಾಗಿದ್ದು, ಸಿಐಡಿ ಪೊಲಿಸರು ಇಬ್ಬರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಪಿ ಎಸ್ ಐ ಪರೀಕ್ಷೆಯಲ್ಲಿ ನಾರಾಯಣ ಸಿ.ಎಂ. 9ನೇ ರ್ಯಾಂಕ್ ಪಡೆದುಕೊಂಡಿದ್ದ. ಇಬ್ಬರ ಓ ಎಂ ಆರ್ ಶೀಟ್, ಕಾರ್ಬನ್ ಶೀಟ್ ನಲ್ಲಿ ವ್ಯತ್ಯಾಸ ಕಂಡುಬಂದಿದ್ದು ಎಫ್ ಎಸ್ ಎಲ್ ವರದಿಯಲ್ಲಿ ಅಕ್ರಮವೆಸಗಿರುವುದು ಪತ್ತೆಯಾಗಿದೆ. ಈಗಾಗಲೇ ಅಣ್ಣ ನಾರಾಯಣ ಸಿ.ಎಂ. ನನ್ನು ಸಿಐಡಿ ಬಂಧಿಸಿ ವಿಚಾರಣೆಗೊಳಪಡಿಸಿದೆ. ಆದರೆ ತಮ್ಮ ನಾಗರಾಜ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗಿದೆ.