ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಫಸ್ಟ್ ರ್ಯಾಂಕ್ ಅಭ್ಯರ್ಥಿ ಕೂಡ ಅರೆಸ್ಟ್ ಆಗಿದ್ದು, 545 ಹುದ್ದೆ ನೇಮಕಾತಿಯೇ ಸಂಪೂರ್ಣ ಅಕ್ರಮವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಪಿಎಸ್ ಐ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ನಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿ ಕುಶಾಲ್ ಕುಮಾರ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದಿದ್ದ ಆರೋಪ ಹಿನ್ನೆಲೆಯಲ್ಲಿ ಕುಶಾಲ್ ಕುಮಾರ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನುಮಾನದ ಮೇರೆಗೆ ವಿಚಾರಣೆಗೆ ಒಳಪಡಿಸಿದಾಗ ಕುಶಾಲ್ ಕುಮಾರ್ ಅಕ್ರಮವೆಸಗಿರುವುದು ಬಯಲಾಗಿದೆ.
ತನಿಖೆ ವೇಳೆ ಕಾರ್ಬನ್ ಕಾಪಿಗೂ ಮೂಲ ಕಾಪಿಗೂ ತೀವ್ರ ವ್ಯತ್ಯಾಸವಿರುವುದು ಪತ್ತೆಯಾಗಿದೆ. ಮೂಲ ಕಾಪಿಯನ್ನು ಕುಶಾಲ್ ಖಾಲಿ ಬಿಟ್ಟಿದ್ದ. ಎರಡೂ ಕಾಪಿಯನ್ನು ಸಿಐಡಿ ಅಧಿಕಾರಿಗಳು ಎಫ್ ಎಸ್ ಎಲ್ ಗೆ ರವಾನಿಸಿದ್ದರು. ಇದೀಗ ಕುಶಾಲ್ ಕುಮಾರ್ ಅಕ್ರಮ ದೃಢಪಟ್ಟಿದ್ದು, ಆರೋಪಿಯನ್ನು ಬಂಧಿಸಲಾಗಿದೆ.